ಸಂಶೋಧನೆ-ನಾವೀನ್ಯ ತಂತ್ರಜ್ಞಾನ ಬಳಕೆಗೆ ಕ್ಯಾಂಪ್ಕೋ ಇನ್ನಷ್ಟು ಆದ್ಯತೆ ನೀಡಬೇಕು: ಸಂಸದ ಕ್ಯಾ.ಬ್ರಿಜೇಶ್‌ ಚೌಟ

KannadaprabhaNewsNetwork |  
Published : Jul 11, 2025, 11:48 PM IST
ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅವರು ಸ್ಥಾಪಕರ ದಿನಾಚರಣೆ, ವಿವಿಧ ಚಾಕಲೇಟ್‌ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಂಗಳೂರಲ್ಲಿ ಕ್ಯಾಂಪ್ಕೋ ಸ್ಥಾಪಕರ ದಿನಾಚರಣೆ, ಹೊಸ ಚಾಕಲೇಟ್‌ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಗಳೂರುಸಂಶೋಧನೆ ಹಾಗೂ ನಾವೀನ್ಯ ತಂತ್ರಜ್ಞಾನ ಬಳಕೆಗೆ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇನ್ನಷ್ಟು ಆದ್ಯತೆ ನೀಡಬೇಕು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ. ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅವರು ಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ವಿವಿಧ ಚಾಕಲೇಟ್‌ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದರು.

ಉತ್ಪಾದನಾ ರಂಗದಲ್ಲಿ ಸಂಶೋಧನೆ ಮತ್ತು ನಾವೀನ್ಯ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ಪ್ರಧಾನಿಯವರ ಆಶಯ. ಅದರಂತೆ ಸಹಕಾರಿ ರಂಗದಲ್ಲೂ ಕ್ಯಾಂಪ್ಕೋ ಸಂಸ್ಥೆ ಇಂದಿನ ಪೀಳಿಗೆಗೆ ಬೇಕಾಗುವ ಉತ್ಪನ್ನಗಳ ತಯಾರಿಗೆ 3.0 ಮಾದರಿಯಲ್ಲಿ ಯೋಜನೆ ಹಮ್ಮಿಕೊಳ್ಳಬೇಕು. ಎಲ್ಲ ಸವಾಲುಗಳನ್ನು ಎದುರಿಸಿ ತನ್ನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯ ತಂತ್ರಜ್ಞಾನವನ್ನು ಬಳಕೆ ಮಾಡಬೇಕು. ನಾವೀನ್ಯ ತಂತ್ರಜ್ಞಾನ ಅಳವಡಿಸುವ ದೃಷ್ಟಿಯಿಂದ ತಾಂತ್ರಿಕ ಸಂಸ್ಥೆಯನ್ನು ಹುಟ್ಟುಹಾಕಬೇಕು. ಈ ಮೂಲಕ ಉಪಯುಕ್ತ ಸಂಶೋಧನೆ ಕೈಗೊಳ್ಳಲು ಅನುಕೂಲವಾಗಲಿದೆ. ಶಿಕ್ಷಣ ಸಂಸ್ಥೆಗಳ ಜೊತೆಯೂ ಕೈಜೋಡಿಸಬಹುದು ಎಂದರು.

ಸುಸ್ಥಿರ ಕೃಷಿ ನಡೆಸಿ:

ಯುವ ಕೃಷಿ ವಿಜ್ಞಾನಿ ಡಾ.ಅಮೃತಾ ಕೃಷ್ಣಮೂರ್ತಿ ನಾಗರಾಜ್‌ ಮಾತನಾಡಿ, ಭಾರತದಲ್ಲಿ ಶೇ.43, ಕರ್ನಾಟಕದಲ್ಲಿ ಶೇ. 30 ರಷ್ಟು ಆರ್ಗಾನಿಕ್‌ ಕಾರ್ಬನ್‌ ಕಡಿಮೆಯಾಗಿದೆ. ಕೃಷಿಯಲ್ಲಿ ಕ್ರಿಮಿನಾಶಕ ಬದಲು ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ದೇಶದ ಆಸ್ತಿ ಬ್ಯಾಂಕಿನಲ್ಲಿ ಅಲ್ಲ, ಮಣ್ಣಿನ ಫಲವತ್ತತೆಯಲ್ಲಿ ಕಾಣಬೇಕು ಎಂದು ಹೇಳಿದರು.

ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಡಾ.ಸತ್ಯನಾರಾಯಣ ಇದ್ದರು. ----------------ಕ್ಯಾಂಪ್ಕೋ ಹೊಸ ಚಾಕಲೇಟ್‌ ಮಾರುಕಟ್ಟೆಗೆ

ಈ ಸಂದರ್ಭ ಕ್ಯಾಂಪ್ಕೋದ ಹೊಸ ಚಾಕಲೇಟ್‌ ಉತ್ಪನ್ನವಾದ ಡಾರ್ಕ್‌ ಅಲೈಟ್‌, ಆರೆಂಜ್‌ ಎಕ್ಲೇರ್ಸ್‌, ಕ್ಯಾಂಪ್ಕೋ ಟ್ರಫ್ಲೆಸ್‌ ಹಾಗೂ ಕ್ಯಾಂಪ್ಕೋ ಡೋಲೋಮೈಟ್‌ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ವಾರಣಾಸಿ ಆರ್ಗಾನಿಕ್‌ ಫಾರ್ಮ್‌ನ ಡಾ.ಕೃಷ್ಣಮೂರ್ತಿ ಮತ್ತು ಡಾ. ಅಶ್ವಿನಿ ಕೃಷ್ಣಮೂರ್ತಿ ಹೊರತಂದ ಕೋಕೋ ಮೌಲ್ಯವರ್ಧಿತ ಉತ್ಪನ್ನವನ್ನು ಪರಿಚಯಿಸಲಾಯಿತು.

ಕ್ಯಾಂಪ್ಕೋ ಶಾಖೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸಿಬ್ಬಂದಿಯನ್ನು ಪುರಸ್ಕರಿಸಲಾಯಿತು.

--------------------ಅಡಕೆ-ಆರೋಗ್ಯ ಬಗ್ಗೆ ಅಧ್ಯಯನ ಆರಂಭ: ಡಾ.ಬಾಲಚಂದ್ರ ಹೆಬ್ಬಾರ್‌

ಅಡಕೆಯಲ್ಲಿ ಹಾನಿಕಾರಕ ಅಂಶಗಳ ಬಗ್ಗೆ ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಸಿಪಿಸಿಆರ್‌ಐ(ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) ನೇತೃತ್ವದಲ್ಲಿ ಅಧ್ಯಯನ ಆರಂಭವಾಗಿದೆ ಎಂದು ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್‌ ಹೇಳಿದರು.

ಅಡಕೆ ಮತ್ತು ಆರೋಗ್ಯದ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಇದು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಈ ಹಿಂದೆ ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಪರಿಶೀಲಿಸಿದಾಗ, ಅಡಕೆ ಜೊತೆ ಇತರೆ ಪದಾರ್ಥಗಳನ್ನು ಸೇರಿಸಿ ಸೇವಿಸಿದವರನ್ನು ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿ ಎಂದು ತಿಳಿಯಲಾಗಿದೆ. ಹೀಗಾಗಿ ಅಡಕೆಯನ್ನು ಮಾತ್ರ ಸೇವಿಸಿದವರನ್ನೂ ಕರಾವಳಿಯ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳ ನೆರವಿನಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗುತ್ತಿದೆ. ಮೂರು ವರ್ಷದೊಳಗೆ ಸಂಪೂರ್ಣ ಅಧ್ಯಯನ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು.

ಕಳೆದ ಎರಡ್ಮೂರು ವರ್ಷಗಳಿಂದ ಹವಾಮಾನ ಬದಲಾವಣೆಯಾಗುತ್ತಿದ್ದು, ಇದು ಅಡಕೆ ಉತ್ಪಾದನೆಯ ಇಳುವರಿ ಮೇಲೆ ಹೊಡೆತ ನೀಡಿದೆ. ಇದಲ್ಲದೆ ಹಳದಿ ರೋಗ, ಎಲೆಚುಕ್ಕಿ ರೋಗಗ‍ಳೂ ಬಾಧಿಸಿದೆ. ಇವುಗಳ ಬಗ್ಗೆಯೂ ಸಮಗ್ರ ಅಧ್ಯಯನ ನಡೆಸಬೇಕಾಗಿದೆ ಎಂದರು. ಅಡಕೆ ಹಾಗೂ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

------------------25 ವರ್ಷಗಳ ಅಭಿವೃದ್ಧಿ ಯೋಜನೆ: ಕಿಶೋರ್‌ ಕೊಡ್ಗಿ

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ 25 ವರ್ಷದ ಅಭಿವೃದ್ಧಿ ಚಿಂತನೆಯೊಂದಿಗೆ ಕ್ಯಾಂಪ್ಕೋ ಆಡಳಿತ ಮಂಡಳಿ ಯೋಜನೆ ರೂಪಿಸಲಿದೆ. ಪುತ್ತೂರಿನಲ್ಲಿ ಚಾಕಲೇಟ್ ಫ್ಯಾಕ್ಟರಿಯ ವಿಸ್ತರಣೆ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರ ಆತ್ಮಬಲ ಕ್ಯಾಂಪ್ಕೋ ಆಗಿದ್ದು, ಸಂಸ್ಥೆಯ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ಟರ ಚಿಂತನೆಯನ್ನು ಮೈಗೂಡಿಸಿಕೊಂಡು ಕ್ಯಾಂಪ್ಕೋ ಮುಂದುವರಿಯಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ