ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ
ಬೆಳ್ಳಂಬೆಳಗ್ಗೆ ಹಸಿರು, ಆಹ್ಲಾದಕರ ಗಾಳಿಯ ಸ್ವಚ್ಛಂದ ವಾತಾವರಣದಲ್ಲಿ ಸ್ಥಳೀಯರು ವಾಯುವಿಹಾರ ಮಾಡುವ ಇಲ್ಲಿನ ನೃಪತುಂಗ ಬೆಟ್ಟದ ಮೇಲೆ ಕಿಡಿಗೇಡಿಗಳ ವಕ್ರದೃಷ್ಟಿ ಬಿದ್ದಿದೆ. ಸಸ್ಯಕಾಶಿಗೆ ನೀರುಣಿಸುವ ಪೈಪ್‌ಲೈನ್ ಹಾಳುಗೆಡಹುವ ಮೂಲಕ ದುಷ್ಕರ್ಮಿಗಳು ಇಲ್ಲಿನ ಪರಿಸರ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಪರಿಸರದ ತುಂಬೆಲ್ಲ ಸಾಕಷ್ಟು ಮರಗಳು, ಗಿಡಗಂಟಿಗಳು ಇರುವುದರಿಂದ ಮನಸ್ಸಿಗೆ ಮುದ ನೀಡುತ್ತದೆ. ಇಡೀ ಆವರಣ ಸುತ್ತಾಡುವುದು ಖುಷಿ ಕೊಡುತ್ತದೆ. ಹಚ್ಚ ಹಸಿರಿನ ಜತೆಗೆ ತಂಗಾಳಿ, ಬಗೆ ಬಗೆ ಬಣ್ಣಗಳ ಹೂಗಳಿಂದ ಬೆಟ್ಟ ಹಿತವೆನಿಸುತ್ತದೆ. ಬೇವು, ನೀಲಗಿರಿ, ಶ್ರೀಗಂಧ, ಜಾಲಿ, ಕಾಡು ಜಾತಿಯ ಸಾವಿರಾರು ಮರಗಳು ಬೆಟ್ಟದ ತುಂಬೆಲ್ಲ ಹರಡಿಕೊಂಡಿವೆ. ಸಾಕಷ್ಟು ಹಣ್ಣುಗಳ ಮರಗಳೂ ಇರುವ ಕಾರಣ ವಿವಿಧ ಜಾತಿಯ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಹಕ್ಕಿಗಳ ಚಿಲಿಪಿಲಿ ನಿರಂತರ ಇರುತ್ತದೆ. ಇಂತಹ ಪ್ರಕೃತಿ ತಾಣದ ಸೌಂದರ್ಯ ಹೆಚ್ಚಿಸಲು ಇಲ್ಲಿನ ನೃಪತುಂಗ ವಾಕರ್ಸ್ ಅಸೋಸಿಯೇಶನ್ ನವರು ಲಕ್ಷಾಂತರ ಖರ್ಚು ಮಾಡಿ ಹೊಸ ಪೈಪ್ ಲೈನ್ ಮಾಡಿದ್ದು, ಈ ಪೈಪ್ ಲೈನ್ ಹಾಳುಗೆಡಹುವ ಮೂಲಕ ವಿಕೃತ ಆನಂದ ಮೆರೆದಿದ್ದಾರೆ.
ಗುಡ್ಡದ ಇಳಿಜಾರು ಪ್ರದೇಶದಲ್ಲಿ ನೃಪತುಂಗ ವಾಕರ್ಸ್ ಅಸೋಸಿಯೇಶನ್‌ನಿಂದ ಗಿಡ ನೆಡುವುದು, ಡ್ರಿಪ್ ಪೈಪ್‌ಲೈನ್ ಸೇರಿದಂತೆ ವಿವಿಧ ಕಾಮಗಾರಿ ಮಾಡಲಾಗಿದೆ. ಅಸೋಸಿಯೇಷನ್ ಸದಸ್ಯರು ಸ್ವಯಂಪ್ರೇರಣೆಯಿಂದ ಹಣ ಸಂಗ್ರಹಿಸಿ ಅಭಿವೃದ್ಧಿ ಕಾರ್ಯ ಮಾಡುತ್ತಾರೆ. ಶನಿವಾರ, ಭಾನುವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗಿಡ ನೆಡುವುದು, ಅಗತ್ಯವಿದ್ದಲ್ಲಿ ಪೈಪ್‌ಲೈನ್ ವ್ಯವಸ್ಥೆ ಸೇರಿ ಇತರೆ ಕಾರ್ಯಗಳನ್ನು ಕೈಗೊಳ್ಳುತ್ತಾರೆ.ಹೀಗೆ ಕಳೆದ ಭಾನುವಾರ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಸುಮಾರು 70 ಜನ ಸೇರಿ 26 ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೆ, ಗಿಡಗಳಿಗೆ ಅನುಕೂಲವಾಗುವಂತೆ ಹೊಸ ಪೈಪ್‌ಲೈನ್ ಮಾಡಿದ್ದಾರೆ. ಹೀಗೆ ಮಾಡಿರುವ ಪೈಪ್‌ಲೈನ್ ಟ್ಯಾಪ್‌ಗಳನ್ನು ಮರುದಿನ ಬೆಳಗಾಗುವಷ್ಟರಲ್ಲಿ ಯಾರೋ ಹಾಳುಗೆಡವಿ ಹೋಗಿದ್ದಾರೆ. ಸುಮಾರು ಐದಾರು ಕಡೆಗಳಲ್ಲಿ ಅಳವಡಿಸಿದ್ದ ಟ್ಯಾಪ್‌ಗಳನ್ನು ಕಿತ್ತು ಅಲ್ಲೇ ಎಸೆದು ಹೋಗಿದ್ದಾರೆ. ಇಂತಹ ಕೃತ್ಯ ಇದೇ ಮೊದಲಲ್ಲ, ಹಿಂದೆಯೂ ಐದಾರು ಬಾರಿ ಹೀಗೆ ಹಾಳು ಮಾಡಲಾಗಿದೆ. ಅಲ್ಲದೆ, ಇಲ್ಲಿನ ಆಲ, ಬಸರಿ, ಅಶ್ವಥ, ಗೋಣಿ, ಬೇವು ಸಸಿಗಳನ್ನು ಕೊಚ್ಚುತ್ತಿದ್ದು, ಇದರಿಂದ ಆ ಸಸಿಗಳು ಸಾಯುತ್ತಿವೆ. ಇಂತಹ ಘಟನೆಗಳಿಂದ ಆಕ್ರೋಶಗೊಂಡಿರುವ ನೃಪತುಂಗ ವಾಕರ್ಸ್ ಅಸೋಸಿಯೇಶನ್ ಸದಸ್ಯರು ಉಗ್ರ ಹೋರಾಟಕ್ಕೆ ಮುಂದಾಗಿದ್ದು, ಇಂತಹ ದುಷ್ಕೃತ್ಯ ಎಸಗಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ.
ಪೈಪ್‌ಲೈನ್ ಹಾಳುಗೆಡವಿರುವವರಿಂದಲೇ ಅದರ ದುರಸ್ತಿಗೆ ತಗಲುವ ವೆಚ್ಚವನ್ನು ವಸೂಲಿ ಮಾಡುವಂತೆ ಆಗ್ರಹಿಸಿರುವ ಅಸೋಸಿಯೇಶನ್ ಮುಂದೆ ಯಾರೂ ಇಂತಹ ಕೃತ್ಯ ಕೈಗೊಳ್ಳದಂತೆ ತಡೆಯುವ ಕೆಲಸವಾಗಬೇಕಿದೆ ಎನ್ನುತ್ತಾರೆ.ಬೆಟ್ಟದಲ್ಲಿ ನಾಡ ಹಂದಿಗಳ ದಂಡು:
ನೃಪತುಂಗ ಬೆಟ್ಟದಲ್ಲಿ ಕೆಲವರು ಹಂದಿಗಳನ್ನು ತಂದು ಬಿಟ್ಟಿದ್ದಾರೆ. ಇದರಿಂದಾಗಿ ಇಲ್ಲಿನ ಪರಿಸರಕ್ಕೆ ಹಾನಿಯಾಗುತ್ತಿದ್ದು, ಹೊಸದಾಗಿ ನಾಟಿ ಮಾಡಿರುವ ಸಸಿಗಳ ಬುಡದಲ್ಲಿ ತೆಗ್ಗು ತೋಡುವ ಹಂದಿಗಳು ಸಾಕಷ್ಟು ಹಾಳು ಮಾಡಿವೆ. ಅಲ್ಲದೆ ಎಲ್ಲೆಂದರಲ್ಲಿ ನೆಲ ಅಗೆಯುತ್ತಿವೆ. ಹೀಗಾಗಿ ಹಂದಿಗಳನ್ನು ಸ್ಥಳಾಂತರಿಸಲು ಇಲ್ಲಿನ ಆರ್‌ಎಫ್‌ಓ ಆರ್.ಎಸ್. ಉಪ್ಪಾರ ಅವರು ಪಾಲಿಕೆಗೆ ಪತ್ರ ಬರೆದಿದ್ದಾರೆ.ದುರುಳರು ಇಲ್ಲಿ ನೃಪತುಂಗ ವಾಕರ್ಸ್ ವತಿಯಿಂದ ಅಳವಡಿಸಿರುವ ಪೈಪ್‌ಲೈನ್ ಹಾಳು ಮಾಡುತ್ತಿದ್ದಾರೆ. ಹಲವು ಬಾರಿ ಇದೇರೀತಿ ಆಗಿರುವುದರಿಂದ ಸುತ್ತಮುತ್ತಲಿನ ಜನರೇ ಈ ರೀತಿ ಮಾಡಿರುವ ಸಂಶಯವಿದೆ. ಇಂತಹ ಕೃತ್ಯ ಎಸಗಿದವರು ನಮ್ಮ ಕೈಗೆ ಸಿಕ್ಕರೆ ಅವರಿಂದಲೇ ಇದರ ಖರ್ಚು ವೆಚ್ಚವನ್ನು ವಸೂಲು ಮಾಡಲು ನಮ್ಮ ಅಸೋಸಿಯೇಶನ್ ಸದಸ್ಯರು ನಿರ್ಧರಿಸಿದ್ದಾರೆ ಎಂದು ಪರಿಸರ ಪ್ರೇಮಿ ಚೆನ್ನು ಹೊಸಮನಿ ಹೇಳಿದ್ದಾರೆ.
ಮೊಹರಂ ಕೊನೆ ದಿನ ಬೆಟ್ಟದಲ್ಲಿ ಜನಸಂದಣಿ ಹೆಚ್ಚಿತ್ತು. ಅಂದೇ ಈ ಕೃತ್ಯ ನಡೆದಿರುವ ಶಂಕೆ ಇದೆ. ನಾವೂ ಕೆಲವರನ್ನು ವಿಚಾರಿಸುತ್ತಿದ್ದೇವೆ. ಸದ್ಯ ಆ ಸ್ಥಳದಲ್ಲಿ ಹೆಚ್ಚಿನ ನಿಗಾ ವಹಿಸಿದ್ದೇವೆ. ಮುಂದೆ ಇಂತಹ ಕೃತ್ಯಗಳಾಗದಂತೆ ನಿಗಾವಹಿಸಲಾಗುವುದು. ಬೆಟ್ಟದಲ್ಲಿ ಕೆಲವರು ಸಾಕು ಹಂದಿಗಳನ್ನು ತಂದುಬಿಟ್ಟಿದ್ದು, ಅವುಗಳ ಸ್ಥಳಾಂತರಕ್ಕೆ ಪತ್ರ ಬರೆಯಲಾಗಿದೆ ಎಂದು ಆರ್‌ಎಫ್‌ಒ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.