ಮೂರು ಗುಂಪುಗಳ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ?

KannadaprabhaNewsNetwork |  
Published : Nov 06, 2023, 12:47 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಾಗಿವೆ. ಒಬ್ಬೊಬ್ಬರದ್ದು ಒಂದೊಂದು ಗುಂಪು. ಡಾ. ಪರಮೇಶ್ವರದ್ದು ದಲಿತರ, ಸಿದ್ದರಾಮಯ್ಯನವರದ್ದು ಹಿಂದುಳಿದವರ ಹಾಗೂ ಡಿ.ಕೆ. ಶಿವಕುಮಾರ ಅವರದ್ದು ಗೌಡರ ಗುಂಪು. ಮೂರು ಗುಂಪುಗಳ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಾಗಿವೆ. ಒಬ್ಬೊಬ್ಬರದ್ದು ಒಂದೊಂದು ಗುಂಪು. ಡಾ. ಪರಮೇಶ್ವರದ್ದು ದಲಿತರ, ಸಿದ್ದರಾಮಯ್ಯನವರದ್ದು ಹಿಂದುಳಿದವರ ಹಾಗೂ ಡಿ.ಕೆ. ಶಿವಕುಮಾರ ಅವರದ್ದು ಗೌಡರ ಗುಂಪು. ಮೂರು ಗುಂಪುಗಳ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ಗುಂಪುಗಳ ನಾಯಕರು ನಡೆಸಿದ ಸಭೆಗೆ ಉತ್ತರ ಕರ್ನಾಟಕ ಭಾಗದ ಹಿರಿಯ ಎಚ್.ಕೆ. ಪಾಟೀಲ ಅವರನ್ನು ಕರೆದಿಲ್ಲ. ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗುವ ಆಸೆಯಿಂದ ಗೌಡರ ಗುಂಪು ಕಟ್ಟಿಕೊಂಡು ಮಠ, ಮಂದಿರ ಸೇರಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ. ಇಂತಹ ಸರ್ಕಾರದಿಂದ ಏನು ನಿರೀಕ್ಷೆ ಸಾಧ್ಯ? ಎಂದರು.

ಲಿಂಗಾಯತರು ಲೆಕ್ಕಕ್ಕಿಲ್ಲ:

ಕಾಂಗ್ರೆಸ್‌ನಲ್ಲಿ ಲಿಂಗಾಯತರು 2ನೇ ದರ್ಜೆ ನಾಗರಿಕರಾಗಿದ್ದಾರೆ. ಕಾಂಗ್ರೆಸ್‌ ಎಂದಿಗೂ ಲಿಂಗಾಯತರಿಗೆ ಗೌರವ ನೀಡಿಲ್ಲ. ಲಿಂಗಾಯತರ ಸ್ಥಿತಿ ಅಲೆಮಾರಿ ಆದಂತಾಗಿದೆ. ಲಿಂಗಾಯತರು ಗೌಡರ ಲೆಕ್ಕಕ್ಕೂ ಇಲ್ಲ, ಕುಲಕರ್ಣಿ ಅವರ ಪುಸ್ತಕದಲ್ಲೂ ಇಲ್ಲ, ಅಂತಹ ಸ್ಥಿತಿಯಲ್ಲಿದ್ದಾರೆ. ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರನ್ನೂ ಸರಿಯಾಗಿ ನಡೆಸಿಕೊಂಡಿಲ್ಲ. ಸದ್ಯದ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಕಾಂಗ್ರೆಸ್ ಖಜಾಂಚಿಯಾಗಿದ್ದವರು. ಇದೀಗ ಸಚಿವರು ಅವರ ಮಾತನ್ನೂ ಕೇಳುತ್ತಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದರು.

ಪಾಪದ ಕೆಲಸ ಮಾಡೋಲ್ಲ:

ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಬೀಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ, ಆ ಪಾಪದ ಕೆಲಸವನ್ನು ನಾವು ಮಾಡುವುದಿಲ್ಲ. ಹಾಲು ಕುಡಿದು ಸಾಯುವವರಿಗೆ ವಿಷ ಹಾಕುವ ಪಾಪದ ಕೆಲಸ ನಾವು ಮಾಡುವುದಿಲ್ಲ ಎಂದರು.

5 ಸಾವಿರ ಕೋಟಿ ಸಂಗ್ರಹ

ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ₹5000 ಕೋಟಿ ಸಂಗ್ರಹ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ ಗೋವಿಂದ ಕಾರಜೋಳ, ಇಂತಹ ಕೆಲವು ಬಿಟ್ಟು ಎಲ್ಲ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದಂತೆ (ಷರತ್ತು ಇಲ್ಲದೆ) ಯಥಾವತ್ತಾಗಿ ಜಾರಿಗೆ ತರಲಿ. ಇಲ್ಲವಾದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಬಂಡೇಳುವಂತೆ ಮಾಡುತ್ತೇವೆ ಎಂದು ಕಾರಜೋಳ ಎಚ್ಚರಿಸಿದರು.

PREV

Recommended Stories

ಡಿಜೆ ಆದೇಶ ಉಲ್ಲಂಘನೆ: 2 ಕೇಸ್ ದಾಖಲು
ಪರಿವಾರ ಆರೋಗ್ಯವಾಗಿದ್ದರೆ ದೇಶ ಸದೃಢ: ಸಂಸದ ಬಸವರಾಜ ಬೊಮ್ಮಾಯಿ