ಅಂಕಗಳಿಂದ ಮಾತ್ರವೇ ಮಕ್ಕಳ ಭವಿಷ್ಯ ಉಜ್ವಲವಾಗಲ್ಲ: ಸುಜಾತ ರಾಮಕೃಷ್ಣ ಅಭಿಮತ

KannadaprabhaNewsNetwork | Published : Nov 6, 2023 12:47 AM

ಸಾರಾಂಶ

ಬ್ರಹ್ಮಶ್ರೀ ನಾರಾಯಣ ಗುರು ಆರ್ಯ ಈಡಿಗ ಮಹಿಳಾ ಜಿಲ್ಲಾ ಸಂಘ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ

- ಪ್ರಶಸ್ತಿ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ - - -

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜದಲ್ಲಿ ಸ್ಥಾನಮಾನ ಪಡೆಯಲು ವಿದ್ಯೆ ಸಾಧನವಾಗಬೇಕು. ಕೇವಲ ಅಂಕಗಳಿಂದ ಮಾತ್ರವೇ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವುದು ಸುಳ್ಳು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ ರಾಮಕೃಷ್ಣ ಹೇಳಿದರು.

ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಆರ್ಯ ಈಡಿಗ ಮಹಿಳಾ ಜಿಲ್ಲಾ ಸಂಘ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರಿ ಉದ್ಯೋಗ ಪಡೆಯುವುದೇ ಮಹತ್ವದ ಸಾಧನೆಯಲ್ಲ. ಅದೊಂದೇ ನಮ್ಮ ರಕ್ಷಣೆಯ ಅಸ್ತ್ರ. ಸಾಧಿಸಲು ಹಲವಾರು ಕ್ಷೇತ್ರದಲ್ಲಿ ಅವಕಾಶವಿದೆ ಎಂದರು.

ಇಂದಿನ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು. ಇದು ಪೋಷಕರ ಒತ್ತಾಯ. ಆದರೆ, ಮಕ್ಕಳಿಗೆ ಸಾಧಿಸಲು ಹಲವು ಕ್ಷೇತ್ರಗಳಲ್ಲಿ ಅವಕಾಶವಿದೆ. ಈ ಕುರಿತು ಪೋಷಕರು ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಕೈಬೆರಳಿನ ತುದಿಯಲ್ಲಿ ಮಾಹಿತಿಯ ಕೋಶವಿದೆ. ಅದನ್ನು ಸಮರ್ಪಕ ಸದ್ಬಳಕೆ ಮಾಡಿಕೊಳ್ಳಬೇಕು. 20 ವರ್ಷಗಳ ಹಿಂದೆ ಇದ್ಯಾವುದಕ್ಕೂ ಅವಕಾಶವಿರಲಿಲ್ಲ. ಆದ್ದರಿಂದ ಮಕ್ಕಳು ದೊಡ್ಡ ಗುರಿಯೊಂದಿಗೆ ಹೆಜ್ಜೆ ಇಡಬೇಕು. ಆಗ ಮಾತ್ರ ಯಶಸ್ಸಿಗೆ ಹತ್ತಿರವಾಗಲು ಸಾಧ್ಯ ಎಂದರು.

ಈಡಿಗ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ನಗರದಲ್ಲಿ ಸಮಾಜದ ಹೆಣ್ಣು ಮಕ್ಕಳ ವಸತಿ ನಿಲಯದ ಕೊರತೆ ಇದೆ. ಇದರಿಂದ ಅನೇಕ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಮಹಿಳಾ ಜಿಲ್ಲಾ ಸಂಘ ನೇತೃತ್ವದಲ್ಲಿ 300 ಹೆಣ್ಣುಮಕ್ಕಳು ಆಶ್ರಯ ಪಡೆಯುವಂತಹ ವಸತಿ ನಿಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಇರಲಿದೆ ಎಂದು ಹೇಳಿದರು.

ಉದ್ಯಮಿ ಸುರೇಶ್ ಬಾಳೆಗುಂಡಿ ಮಾತನಾಡಿ, ಸಮಾಜದ ಯುವಪೀಳಿಗೆ ವಿದ್ಯಾವಂತರಾಗಬೇಕು, ಸಂಘಟಿತರಾಗಬೇಕು. ಇದು ನಾರಾಯಣ ಗುರುಗಳ ಆಶಯವಾಗಿತ್ತು. ಹೆಚ್ಚು ಅಂಕ ಪಡೆಯುವ ಮೂಲಕ ಚಿಕ್ಕ ವಯಸ್ಸಿಗೆ ಮಕ್ಕಳು ಸಾಧನೆ ಮಾಡಿದ್ದಾರೆ. ಈ ಸಾಧನೆಯ ಗುರಿ ಇಲ್ಲಿಗೇ ನಿಲ್ಲಬಾರದು ಎಂದು ಆಶಿಸಿದರು.

ಬ್ರಹ್ಮಶ್ರೀ ನಾರಾಯಣ ಗುರು ಆರ್ಯ ಈಡಿಗ ಮಹಿಳಾ ಜಿಲ್ಲಾ ಸಂಘ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರಿ ಮಾತನಾಡಿ, ಮಕ್ಕಳನ್ನು ವಿದ್ಯಾವಂತ ಹಾಗೂ ಬುದ್ಧಿವಂತರನ್ನಾಗಿ ಮಾಡುತ್ತಿದ್ದೇವೆ. ಆದರೆ, ಮಾನವೀಯ ಮೌಲ್ಯ ಕಲಿಸುವಲ್ಲಿ ಹಿಂದೆ ಉಳಿದ್ದೇವೆ. ಹಿಂದುಳಿದ ವರ್ಗ ಮುನ್ನಲೆಗೆ ಬರಲು ನಾರಾಯಣ ಗುರುಗಳು ಶ್ರಮಿಸಿದ್ದರು. ಅದೇ ಮಾರ್ಗದಲ್ಲಿ ಸಂಘಟನೆ ಸಾಗುತ್ತಿದೆ ಎಂದು ಹೇಳಿದರು.

ಸಮಾಜದ ಪ್ರತಿಭಾವಂತ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಭದ್ರಾವತಿ ವಾಸು ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೈದ್ಯರಾದ ಕಾವ್ಯ ಪ್ರದೀಪ್, ಪತ್ರಕರ್ತ ನಾಗರಾಜ್ ನೇರಿಗೆ, ರಾಜಪ್ಪ ತೇಕಲೆ, ರವಿಕುಮಾರ್, ಪ್ರವೀಣ್ ಹೀರೆಗೋಡು, ಕಲ್ಲನಾ, ಮೋಹನ್ ಚಂದ್ರಗುತ್ತಿ, ಭುಜಂಗ ಪೂಜಾರಿ, ಪ್ರಭಾವತಿ, ಎಚ್.ನಾಗರಾಜ್, ಸಾವಿತ್ರಮ್ಮ ಶಿವಪ್ಪ, ಭಾರತಿ ಶಂಕರ್ ಇದ್ದರು.

Share this article