ಡಿಸೆಂಬರ್‌ನಿಂದ ಯುವನಿಧಿ ಯೋಜನೆ ಚಾಲನೆ

KannadaprabhaNewsNetwork | Published : Nov 6, 2023 12:47 AM

ಸಾರಾಂಶ

. ಯುವನಿಧಿ ಯೋಜನೆಯನ್ನು ಸಹ ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ₹250 ಕೋಟಿ ಅನುದಾನ ನಿಗದಿಗೊಳಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಡಿಸೆಂಬರ್‌ನಿಂದ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಸಂಸ್ಥೆಯ ಸ್ಕಿಲ್ ಡೆವಲಪ್‌ಮೆಂಟ್ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಚುನಾವಣೆ ಮುನ್ನ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳು ಜಾರಿಗೊಳಿಸಲಾಗಿದ್ದು, ಸಮರ್ಪಕವಾಗಿ ಅನುಷ್ಠಾನಗೊಂಡಿವೆ. ಯುವನಿಧಿ ಯೋಜನೆಯನ್ನು ಸಹ ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ₹250 ಕೋಟಿ ಅನುದಾನ ನಿಗದಿಗೊಳಿಸಿಕೊಳ್ಳಲಾಗಿದೆ. `ಯುವನಿಧಿ’ಯ ಮೊತ್ತವು ಭವಿಷ್ಯದಲ್ಲಿ ಪ್ರತಿ ವರ್ಷಕ್ಕೆ ₹2500 ಕೋಟಿಗಳಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಐಟಿಐ, ಎಂಜಿನಿಯರಿಂಗ್, ಡಿಪ್ಲೊಮಾ ಪದವೀಧರರಿಗೆ ಕೌಶಲ್ಯಾಧಾರಿತ ಮತ್ತು ಉದ್ಯೋಗ ಭರವಸೆಯ ಪ್ರಾಕ್ಟಿಕಲ್ ತರಬೇತಿ ಸ್ಕಿಲ್‌ಗ್ಯಾಪ್ ತುಂಬುವ ವ್ಯವಸ್ಥೆಯನ್ನು ಜಾರಿ ಮಾಡಲು ಉದ್ಯೋಗದಾತರು ಮತ್ತು ಕೈಗಾರಿಕೋದ್ಯಮಿಗಳನ್ನೊಳಗೊಂಡ `ಸ್ಕಿಲ್ ಮಿಷನ್’ ಪ್ರಾರಂಭಿಸಲಾಗಿದೆ ಎಂದರು.

ಪ್ರಸ್ತುತ ಕರ್ನಾಟಕದಲ್ಲಿ 12 ಸಾವಿರ ವೈದ್ಯಕೀಯ ಸೀಟುಗಳು ಪ್ರತಿವರ್ಷ ಲಭ್ಯ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಲು ಪ್ರತಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸುವ ಚಿಂತನೆ ನಡೆದಿದೆ. ಆಗ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲಿದ್ದಾರೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಡೆಸುತ್ತಿರುವ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಕರ್ನಾಟಕದಲ್ಲಿಯೇ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಸಚಿವ ಬಿ. ನಾಗೇಂದ್ರ ಮಾತನಾಡಿ, 100 ಎಕರೆ ಭೂಮಿಯಲ್ಲಿ ಒಣಮೆಣಸಿಕಾಯಿ ಮಾರುಕಟ್ಟೆ, ₹5 ಸಾವಿರ ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್ , ಎಪಿಎಂಸಿ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದರು.

ಇದೇ ವೇಳೆ ಬಳ್ಳಾರಿ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಪ್ರಗತಿಗೆ ಸಂಬಂಧಿಸಿದಂತೆ ಸಂಸ್ಥೆಯ ಪ್ರಮುಖರು ಸಚಿವರಿಗೆ ಮನವಿ ಸಲ್ಲಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಕೆ.ಸಿ. ಸುರೇಶಬಾಬು, ಎ. ಮಂಜುನಾಥ್, ಎಸ್. ದೊಡ್ಡನಗೌಡ, ಸೊಂತಗಿರಿಧರ, ಡಾ. ಮರ್ಚೇಡ್ ಮಲ್ಲಿಕಾರ್ಜುನ, ವಿ. ರಾಮಚಂದ್ರ, ಜಂಟಿ ಖಜಾಂಚಿ ನಾಗಳ್ಳಿ ರಮೇಶ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.

Share this article