ಕನ್ನಡಪ್ರಭ ವಾರ್ತೆ ಕಡೂರು
ಶನಿವಾರ ರಾತ್ರಿ ಸುಮಾರು 10.30ಕ್ಕೆ ಗುಡುಗು ಮಿಂಚಿನಿಂದ ಆರಂಭಗೊಂಡ ಸೋನೆ ಮಳೆಯು ಇಡೀ ರಾತ್ರಿ ಸುರಿಯಿತು. ಸತತ ಸುರಿದ ಮಳೆಗೆ ತಾಲೂಕಿನ ಕಲ್ಕೆರೆ ಕೆರೆಯಿಂದ ನೀರು ಹೊರಗೆ ಹೋಗುವ ಕಾಲುವೆ ಒಡೆದು ಹೋಗಿ, ನೂರಾರು ಎಕರೆಯಲ್ಲಿ ಇರುವ ಅಡಿಕೆ, ತೆಂಗಿನ ತೋಟಗಳು ಹಾಗು ಜಮೀನುಗಳು ನೀರಿನಿಂದ ಜಲಾವೃತವಾಗಿದೆ.
ಸಖರಾಯ ಪಟ್ಟಣ ಹೋಬಳಿ ಸ್ವಾಮಿ ಕಟ್ಟೆ ಗ್ರಾಮದಲ್ಲಿ ಲೋಕೇಶಪ್ಪ ಎಂಬುವರಿಗೆ ಸೇರಿದ ಮನೆ ಗೋಡೆಯು ಕುಸಿದಿದೆ. ಎಲ್ಲರೂ ಮನೆಯಲ್ಲಿ ಇರುವ ವೇಳೆಯಲ್ಲಿಯೇ ಈ ಘಟನೆ ನಡೆದಿದ್ದು ತಕ್ಷಣವೇ ಮನೆಯಿಂದ ಎಲ್ಲರೂ ಹೊರ ಬಂದ ಕಾರಣ ಯಾವುದೇ ಅನಾಹುತವಾಗಿಲ್ಲ.ಇನ್ನು ಬಾಸೂರು ಗ್ರಾಮದ ಸಿದ್ರಾಮಪ್ಪ ಎಂಬುವರ ಮನೆಗೆ ನೀರು ನುಗ್ಗಿದ್ದು ಕುಟುಂಬದವರು ರಾತ್ರಿ ಪೂರಾ ನೀರನ್ನು ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಆದರೆ ಶನಿವಾರ ರಾತ್ರಿ ಕಡೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆ ಬಂದಿದ್ದು ಕೆಲವು ಕಡೆ ತೋಟಗಳಿಗೆ ನೀರು ನುಗ್ಗಿದೆ.
ಶನಿವಾರ ಚೌಳಹಿರಿಯೂರು ಸುತ್ತಲಲ್ಲಿ ರಾತ್ರಿ ಬಂದ ಮಳೆಯಿಂದ ತುಂಬಿದ ಕುಕ್ಕ ಸಮುದ್ರ ಕೆರೆಯಿಂದ ರಭಸವಾಗಿ ಬಂದ ನೀರಿನಿಂದ ಕಾಲುವೆ ಒಡೆದು ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ವಿದ್ಯುತ್ ತಂತಿ ಕಂಬಗಳು ಬೀಳುವ ಸ್ಥಿತಿಯಲ್ಲಿದೆ.