ಕೆನಾಲ್‌ ಯೋಜನೆ ರೈತರಿಗೆ ಮರಣ ಶಾಸನ

KannadaprabhaNewsNetwork |  
Published : Jun 26, 2024, 12:33 AM IST
ಬಿಜೆಪಿ | Kannada Prabha

ಸಾರಾಂಶ

ಜಿಲ್ಲೆಯ ಕುಡಿಯುವ ನೀರಿಗೆ ಮಾರಕವಾಗಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ಕುಡಿಯುವ ನೀರಿಗೆ ಮಾರಕವಾಗಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.ಇದೇ ವಿಷಯವಾಗಿ ನಡೆದ ತುಮಕೂರು ಜಿಲ್ಲಾ ಬಂದ್ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಶಾಸಕರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಾಗಿರುವ ಹೇಮಾವತಿ ನೀರಿನ ನಮ್ಮ ಪಾಲನ್ನು ಮೀಸಲಿರಿಸಬೇಕು. ರೈತರ ಹಾಗೂ ಸಾರ್ವಜನಿಕರ ಹಿತ ಕಾಪಾಡುವುದು ಹಾಗೂ ಜಿಲ್ಲೆಯ ಕುಡಿಯುವ ನೀರಿಗೆ ಮಾರಕವಾಗಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರ ಜಿಲ್ಲೆಯ ಜನರಪರವಾಗಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಈ ಯೋಜನೆಯಿಂದ ತುಮಕೂರು ಜಿಲ್ಲೆಗೆ ಮೀಸಲಿರುವ ಹೇಮಾವತಿ ನೀರಿನ ಪಾಲು ನ್ಯಾಯ ಸಮ್ಮತವಾಗಿ ನಮಗೆ ದೊರೆಯುವುದಿಲ್ಲ ಎಂಬ ಅಂತಕ ನಮ್ಮದಾಗಿದೆ. ಈ ಯೋಜನೆಯು ಜಾರಿಗೊಂಡರೆ ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು.

ಹೇಮಾವತಿ ನಾಲಾ ವಲಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲಾ ಅಧುನೀಕರಣ ಕಾಮಗಾರಿಯು ಚಾಲ್ತಿಯಲ್ಲಿದ್ದು ಮುಗಿಯುವ ಹಂತದಲ್ಲಿದೆ. ಆದರೆ ಏಕಾಏಕಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಟಾನಕ್ಕೆ ತಂದಿರುವುದರಿಂದ ಸಾವಿರಾರು ಕೋಟಿ ರು. ಪೋಲಾಗುವುದರ ಜೊತೆಗೆ ಜಿಲ್ಲೆಯ ಜನರಿಗೆ ಅನ್ಯಾವಾಗಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ತುಮಕೂರು ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ನೀರಿನ ಮೂಲ ಆಧಾರವಾಗಿರುವ ಹೇಮಾವತಿ ಯೋಜನೆಯ ಆಶಯಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಕಾರಣಕ್ಕೂ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮುಂದುವರೆಸಬಾರದು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ತುಮಕೂರು ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳವಣಿಗೆಯಾಗಿ, ಜನಸಂಖ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ನಮಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಶಯ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ನಗರ ಅಧ್ಯಕ್ಷ ಟಿ.ಎಚ್.ಹನುಮಂತರಾಜು, ನಗರ ಉಪಾಧ್ಯಕ್ಷ ವಿರೂಪಾಕ್ಷಪ್ಪ, ಒಬಿಸಿ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಓಬಿಸಿ ನಗರಾಧ್ಯಕ್ಷ ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಎಸ್ಸಿ ಮೋರ್ಚಾ ನಗರಾಧ್ಯಕ್ಷ ಹನುಮಂತರಾಯಪ್ಪ, ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಮಾಜಿ ಸದಸ್ಯರಾದ ಇಂದ್ರಕುಮಾರ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮಂಜುಳಾ ಆದರ್ಶ್, ವೀಣಾ ಮನೋಹರಗೌಡ, ಧರಣೇಂದ್ರಕುಮಾರ್, ಪುಟ್ಟರಾಜು, ಮಹೇಶ್, ಜೆಡಿಎಸ್ ಎಸ್.ಟಿ. ಘಟಕದ ರಾಜ್ಯ ಉಪಾಧ್ಯಕ್ಷ ಸೋಲಾರ ಕೃಷ್ಣಮೂರ್ತಿ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಕೆ.ಜಿ.ವಿರೂಪಾಕ್ಷ, ಸತ್ಯಮಂಗಲ ಜಗೀಶ್, ಬೆಳ್ಳಿ ಲೋಕೇಶ್, ರೈತಮೋರ್ಚಾ ಲೋಕೇಶ್, ಕಾರ್ಯಾಲಯ ಕಾರ್ಯದರ್ಶಿ ಗಣೇಶ್‌ಪ್ರಸಾದ್, ಜಿ.ಎಸ್.ನಂದಿನಾಥ್, ನಗರ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಬೂ ಮೋಹನ್, ಮಹಾಲಕ್ಷ್ಮಿ, ವಿಜಯ, ರಾಧಾ ಗಂಗಾಧರ್, ಕಮಲಮ್ಮ, ಶೋಭಾ ಅಭಿಲಾಷ್, ಮಮತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ