ಖಾಲಿ ಹುದ್ದೆ ಭರ್ತಿಗಾಗಿ ಕೆನರಾ ಬ್ಯಾಂಕ್‌ ಸಿಬ್ಬಂದಿ ಪ್ರತಿಭಟನೆ

KannadaprabhaNewsNetwork |  
Published : Dec 03, 2025, 02:00 AM IST
Members of Canara bank Staff Union protest | Kannada Prabha

ಸಾರಾಂಶ

ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ನ್ಯಾಯಯುತ ಮತ್ತು ಪಾರದರ್ಶಕ ವರ್ಗಾವಣೆ ನೀತಿಯನ್ನು ಅನುಷ್ಠಾನಕ್ಕೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆನರಾ ಬ್ಯಾಂಕ್‌ ಸ್ಟಾಫ್‌ ಯೂನಿಯನ್‌ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ನ್ಯಾಯಯುತ ಮತ್ತು ಪಾರದರ್ಶಕ ವರ್ಗಾವಣೆ ನೀತಿಯನ್ನು ಅನುಷ್ಠಾನಕ್ಕೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆನರಾ ಬ್ಯಾಂಕ್‌ ಸ್ಟಾಫ್‌ ಯೂನಿಯನ್‌ ಆಗ್ರಹಿಸಿದೆ.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕೆನರಾ ಬ್ಯಾಂಕ್‌ ಸ್ಟಾಫ್‌ ಯೂನಿಯನ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬ್ಯಾಂಕಿನ ಸಿಬ್ಬಂದಿ, ವರ್ಷದಿಂದ ವರ್ಷಕ್ಕೆ ಕೆನರಾ ಬ್ಯಾಂಕ್‌ ವಹಿವಾಟು ಹೆಚ್ಚುತ್ತಲೇ ಇದೆ. 2021ರಲ್ಲಿ 16.86 ಲಕ್ಷ ಕೋಟಿ ಇದ್ದ ವ್ಯವಹಾರವು 2025ರ ಸೆಪ್ಟೆಂಬರ್‌ 30ರ ವೇಳೆಗೆ 26.78 ಲಕ್ಷ ಕೋಟಿಗಳಿಗೆ ಬೆಳೆದಿದೆ. 2025-26ರ ಹಣಕಾಸು ವರ್ಷದ ಎರಡನೇ ತ್ರೈಮಾಸಿದಲ್ಲಿ ಕೆನರಾ ಬ್ಯಾಂಕ್‌ 8588 ಕೋಟಿ ರುಗಳ ಒಟ್ಟು ಲಾಭ ಮತ್ತು 4774 ಕೋಟಿ ರು.ಗಳ ನಿವ್ವಳ ಲಾಭವನ್ನು ದಾಖಲಿಸಿದೆ. ಆದರೆ, 2021 ಮಾರ್ಚ್‌ ಅವಧಿಯಲ್ಲಿ 88213 ಇದ್ದ ಉದ್ಯೋಗಿಗಳ ಸಂಖ್ಯೆ 2025 ಮಾರ್ಚ್‌ ಅಂತ್ಯದ ವೇಳೆಗೆ 81,260ಕ್ಕೆ ಕುಸಿದಿದೆ ಎಂದರು.

ಬ್ಯಾಂಕ್‌ ಸಿಬ್ಬಂದಿ ಕೇವಲ ಬ್ಯಾಂಕಿಂಗ್‌ ವ್ಯವಹಾರ ಮಾತ್ರವಲ್ಲದೇ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಅವಾಸ್ತವಿಕ ಗುರಿಗಳನ್ನು ಸಾಧಿಸಬೇಕಾದ ಪರಿಸ್ಥಿತಿ ಇದೆ. ಸಿಬ್ಬಂದಿಗಳ ಕೊರತೆಯಿಂದ ನೌಕರರು ಒತ್ತಡಕ್ಕೆ ಒಳಗಾಗುತ್ತಿದ್ದು ಗ್ರಾಹಕರೊಂದಿಗೆ ಸಮಚಿತ್ತರಾಗಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆಯು ಇದರಲ್ಲಿ ಎದ್ದುಕಾಣುತ್ತಿದ್ದು, ಬ್ಯಾಂಕ್‌ ಸಿಬ್ಬಂದಿ ಮತ್ತು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಶೀಘ್ರದಲ್ಲೆ ಕೆನರಾ ಬ್ಯಾಂಕ್‌ಗಳ ಎಲ್ಲ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ದಿನಗೂಲಿ ನೌಕರರು ಮತ್ತು ಪ್ಯಾನಲ್‌ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ನ್ಯಾಯಯುತ ಮತ್ತು ಪಾರದರ್ಶಕ ವರ್ಗಾವಣೆ ನೀತಿ ಅನುಷ್ಠಾನಕ್ಕೆ ತರಬೇಕು. ಉದ್ಯೋಗಿ ಸ್ನೇಹಿ ಸಾಫ್ಟ್‌ವೇರ್‌ಗಳನ್ನು ಅಳವಡಿಸಬೇಕು. ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು