ಈಗಾಗಲೇ ನೋಂದಣಿ ಪಡೆದ ನಕಲಿ ಕಾರ್ಮಿಕರ ಕಾರ್ಡ್ ಕೂಡಲೇ ರದ್ದು ಪಡಿಸಬೇಕು. ವಿವಿಧ ವಲಯಗಳ ಅರ್ಹ ಗ್ರಾಮೀಣ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಕಾರ್ಮಿಕ ಇಲಾಖೆಯ ಸೌಲಭ್ಯ ಕಲ್ಪಿಸುವಂತೆ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಈಗಾಗಲೇ ನೋಂದಣಿ ಪಡೆದ ನಕಲಿ ಕಾರ್ಮಿಕರ ಕಾರ್ಡ್ ಕೂಡಲೇ ರದ್ದು ಪಡಿಸಬೇಕು. ವಿವಿಧ ವಲಯಗಳ ಅರ್ಹ ಗ್ರಾಮೀಣ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಕಾರ್ಮಿಕ ಇಲಾಖೆಯ ಸೌಲಭ್ಯ ಕಲ್ಪಿಸುವಂತೆ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ಪಟ್ಟಣದ ಗುರುಭವನ ಮೈದಾನದಲ್ಲಿ,ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಗಾರೆ ಕೆಲಸ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಮತ್ತು ವೆಲ್ಡಿಂಗ್ ಕೆಲಸ ಮಾಡುವ ಸುಮಾರು 250 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಸಾಮಗ್ರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.
ಕಾರ್ಮಿಕರ ಹೆಸರಿನಲ್ಲಿ ಅನೇಕ ಮಂದಿ ನಕಲಿ ನೋಂದಣಿ ಮಾಡಿಸಿ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಇದೆ. ಅರ್ಹರಿಗೆ ಸಿಗುವ ಸೌಲಭ್ಯ ಕಸಿದುಕೊಳ್ಳುತ್ತಿದ್ದು, ನಕಲಿ ಕಾರ್ಡ್‌ದಾರರನ್ನು ಪತ್ತೆ ಹಚ್ಚಿ ಕೂಡಲೇ ಕಾರ್ಡ್ ರದ್ದುಪಡಿಸಬೇಕು. ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಾರ್ಮಿಕರ ಮಕ್ಕಳಿಗೆ ಸೂಕ್ತ ಸೌಲಭ್ಯ ಸಿಗಬೇಕು. ಮಕ್ಕಳ ಉನ್ನತ ವ್ಯಾಸಂಗಕ್ಕೆ ಸಹಾಯ ಧನ ಕಲ್ಪಿಸಬೇಕು. ತಮ್ಮ ತಂದೆ ವೆಂಕಟರಮಣಪ್ಪ ಅವರು ಕಾರ್ಮಿಕ ಇಲಾಖೆ ಸಚಿವರಾಗಿದ್ದ ವೇಳೆ ಸರ್ಕಾರದಿಂದ 12ಸಾವಿರ ಕೋಟಿ ಮೀಸಲಿಡುವ ಮೂಲಕ ತಾಲೂಕು ಸೇರಿದಂತೆ ರಾಜ್ಯದ ಸಾವಿರಾರು ಕಾರ್ಮಿಕರ ಕಲ್ಯಾಣಕ್ಕಾಗಿ ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡರು.
ಕಾರ್ಮಿಕರ ಆರೋಗ್ಯ ದೃಷ್ಟಿ ಹಾಗೂ ಅರ್ಥಿಕ ಪ್ರಗತಿಯನ್ನು ಗಂಭೀರವಾಗಿ ಪರಿಗಣಿಸಿ,ಸರ್ಕಾರದ ವಿವಿಧ ಯೋಜನೆ ಅಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾರ್ಮಿಕರು ಮುಂದೆ ಬಂದು ಇಲಾಖೆಯಲ್ಲಿ ನೋಂದಣಿ ಪಡೆಯುವ ಮೂಲಕ ಕಾರ್ಡ್ ಪಡೆಯಬೇಕು. ತಾಲೂಕಿನಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಕಾರಣ ಕಾರ್ಮಿಕ ಇಲಾಖೆ 35ಕೋಟಿ ವೆಚ್ಚದಲ್ಲಿ ತಾಲೂಕಿನ ಸಿದ್ದಾಪುರ ಬಳಿ ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸುಸಜ್ಜಿತವಾದ ಶಾಲೆ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ತಾಲೂಕಿನ ಸಣ್ಣ ರೈತರ ಸಮಸ್ಯೆ ಪರಿಗಣಿಸಿ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 30ಕೊಳವೆ ಬಾವಿ ಕೊರೆಸಿದ್ದು, ಎಲ್ಲ ಬೋರ್‌ವೆಲ್‌ಗಳಲ್ಲಿಯು ನೀರು ಬರುತ್ತಿದೆ. ಹೀಗಾಗಿ ಪಂಪುಮೋಟಾರ್ ಹಾಗೂ ಇತರೆ ಎಲೆಕ್ಟ್ರಿಕಲ್ ಸಾಮಗ್ರಿ ವಿತರಿಸಲಾಗಿದೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಬಳಿಕ ತಾಲೂಕಿನ ಜನಸಾಮಾನ್ಯರ ಹಿತ,ಹಾಗೂ ತಾಲೂಕಿನ ಪ್ರಗತಿ ಹಿನ್ನಲೆಯಲ್ಲಿ ಪಕ್ಷ ಭೇದ ಮಾಡದೆ ಬಡವರಿಗೆ ಅನುಕೂಲ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು. ಈ ವೇಳೆ ತಹಸೀಲ್ದಾರ್ ವೈ ರವಿ, ತಾಪಂ ಇಒ ಮಧುಸೂದನ್, ಸಿಪಿಐ ಸುರೇಶ್‌ಗೌಡ, ಕಾರ್ಮಿಕ ಇಲಾಖೆ ತಾಲೂಕು ನಿರೀಕ್ಷಕ ಸತೀಶ್, ಸುದೇಶ್ ಬಾಬು, ಶಂಕರ್ ರೆಡ್ಡಿ, ಚಂದ್ರಶೇಖರ ರೆಡ್ಡಿ,ಬತ್ತಿನೇನಿ ನಾಗೇಂದ್ರರಾವ್, ವಿರಪಸಮುದ್ರ ರಾಮಾಂಜಿನಪ್ಪ, ಮಂಜುನಾಥ್, ಜಂಗಮರಹಳ್ಳಿ ವೀರಭದ್ರಪ್ಪ, ಆರ್.ಎ.ಹನುಮಂತರಾಯಪ್ಪ, ಭಾಸ್ಕರ್ ನಾಯ್ಡು,ಗುಮ್ಮಘಟ್ಟ ಈಶ್ವರ್, ಗಿರಿಸ್ವಾಮಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.