ಕೊಡಗು ವಿವಿ ರದ್ದು ಪ್ರಸ್ತಾವನೆ ಕೈಬಿಡಲು ಒತ್ತಾಯ

KannadaprabhaNewsNetwork |  
Published : Feb 28, 2025, 12:50 AM IST
ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಕುಶಾಲನಗರ ತಾಲೂಕು ಘಟಕ ಒತ್ತಾಯಿಸಿದೆ. | Kannada Prabha

ಸಾರಾಂಶ

ಪ್ರಸಕ್ತ ಆಡಳಿತದಲ್ಲಿರುವ ಸರ್ಕಾರ ವಿವಿಯನ್ನು ಉಳಿಸಿ ಅಭಿವೃದ್ಧಿಗೊಳಿಸಬೇಕು ಎಂದು ಎಂ ಬಿ ಮೊಣ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಿಲ್ಲೆಯ ಕುಶಾಲನಗರದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಕೊಡಗು ವಿಶ್ವವಿದ್ಯಾಲಯವನ್ನು ರದ್ದುಗೊಳಿಸಿ ಇತರ ವಿವಿಗಳಿಗೆ ವಿಲೀನಗೊಳಿಸಲು ಚಿಂತನೆ ಹರಿಸಿರುವ ಸರ್ಕಾರದ ಸಚಿವ ಸಂಪುಟದ ಉಪಸಮಿತಿಯ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಕುಶಾಲನಗರ ತಾಲೂಕು ಘಟಕ ಒತ್ತಾಯಿಸಿದೆ.

ಈ ಸಂಬಂಧ ತಾಲೂಕು ಸಂಘದ ಅಧ್ಯಕ್ಷರಾದ ಎಂ ಬಿ ಮೊಣ್ಣಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು ರಾಜ್ಯದಲ್ಲಿ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದು, ಪ್ರಸಕ್ತ ಆಡಳಿತದಲ್ಲಿರುವ ಸರ್ಕಾರ ವಿವಿಯನ್ನು ಉಳಿಸಿ ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.

ಜಿಲ್ಲೆಯ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಇಲ್ಲಿಯೇ ಅವಕಾಶ ನೀಡಬೇಕು ಆ ಮೂಲಕ ಎಲ್ಲರಿಗೂ ಉನ್ನತ ಶಿಕ್ಷಣದ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂಬಂಧ ಹೋರಾಟಕ್ಕೆ ತಮ್ಮ ಸಂಘ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ಸಂಘದ ಸ್ಥಾಪಕ ಅಧ್ಯಕ್ಷರು ಹಾಗೂ ಸಲಹೆಗಾರರು ಆಗಿರುವ ಎಂ ಎಚ್ ನಜೀರ್ ಅಹ್ಮದ್ ಅವರು ಮಾತನಾಡಿ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಮೃದ್ಧಿಯಾದ ತೆರಿಗೆ ಹಣ ನೀಡುತ್ತಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಇದೀಗ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಉನ್ನತ ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು. ಬಡ ಮಧ್ಯಮ ವರ್ಗದ ಮಕ್ಕಳ ಅನುಕೂಲಕ್ಕೆ ಕೊಡಗು ವಿವಿಯನ್ನು ಉಳಿಸಿ ಅಭಿವೃದ್ಧಿಗೊಳಿಸುವ ಹೊಣೆ ಹಾಲಿ ಸರ್ಕಾರದ ಮೇಲಿದೆ

ಯಾವುದೇ ಸಂದರ್ಭ ಕೊಡಗು ವಿವಿಯನ್ನು ವಿಲೀನಗೊಳಿಸುವ ಸರ್ಕಾರದ ಚಿಂತನೆ ಕೈಬಿಡಬೇಕು. ಹೋರಾಟ ಮಾಡುವ ಮೂಲಕ ಉಳಿಸಿಕೊಳ್ಳುವುದು ಸಂಘ ಸಂಸ್ಥೆಗಳು ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ನಜೀರ್ ಅಹ್ಮದ್ ಜನರಿಗೆ ನೀಡಿದ ವ್ಯವಸ್ಥೆಯನ್ನು ಮತ್ತೆ ಕಿತ್ತುಕೊಳ್ಳುವುದು ಸಮಂಜಸವಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಜಿ ಕೆಂಚಪ್ಪ, ಖಜಾಂಚಿ ವಿ ಆರ್ ಹೆಗ್ಡೆ ಸಂಘಟನಾ ಕಾರ್ಯದರ್ಶಿ ಕೆ ಎನ್ ರಾಜಪ್ಪ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾದ ಸಿ ಎ ಸಾವಿತ್ರಿ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ