ತಂಬಾಕು ಮಾರುತ್ತಿರುವ ನಂದಿನ ಬೂತ್‌ ಪರವಾನಗಿ ರದ್ದು ಮಾಡಿ

KannadaprabhaNewsNetwork | Published : Jan 18, 2025 12:49 AM

ಸಾರಾಂಶ

ನಂದಿನಿ ಹಾಲು ಮಾರಾಟದ ಬೂತ್‌ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅಂತಹ ಬೂತ್‌ಗಳ ಪರವಾನಗಿ ರದ್ದು ಪಡಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಂದಿನಿ ಹಾಲು ಮಾರಾಟದ ಬೂತ್‌ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅಂತಹ ಬೂತ್‌ಗಳ ಪರವಾನಗಿ ರದ್ದು ಪಡಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ತಂಬಾಕು ಸೇವನೆ ಮಾಡುತ್ತಿರುವುದು ಕಂಡುಬರುತ್ತಿದೆ. ಪೋಷಕರು ಹಾಗೂ ಶಿಕ್ಷಕ ವೃಂದ ಎಚ್ಚರವಹಿಸಿ ಮಕ್ಕಳಿಗೆ ತಿಳುವಳಿಕೆ ನೀಡಿ ಸರಿದಾರಿಯಲ್ಲಿ ನಡೆಯುವಂತೆ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.ಶಾಲಾ ಕಾಲೇಜು ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಾವೆಲ್ಲ ವಿದ್ಯಾವಂತರೆ ಆದರೆ ಪ್ರಾಮಾಣಿಕತೆ ಕಡಿಮೆಯಾಗಿದೆ. ನನ್ನ ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ ಏನು ಎಂಬುದನ್ನು ಅರಿತು ನಡೆಯಬೇಕು. ಎಲ್ಲಾ ನೀತಿ ನಿಯಮಗಳು ಮನೆಯಿಂದಲೇ ಪ್ರಾರಂಭವಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಮನುಷ್ಯರನ್ನು ಕೆಟ್ಟ ವ್ಯಸನಗಳಿಂದ ಹೊರತಂದು ಸರಿದಾರಿಗೆ ತರುವುದು ಬಹುಮುಖ್ಯ ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.ತಂಬಾಕು ಉತ್ಪನ್ನಗಳ ಮಾರಾಟದ ಬಗ್ಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಹೆಚ್ಚಿನ ಗಮನಹರಿಸಿ ಪರಿಣಾಮಕಾರಿಯಾಗಿ ತಡೆಗಟ್ಟಲು ಅಧಿಕಾರಿಗಳು ನಿಗಾ ವಹಿಸಲು ಸೂಚನೆ ನೀಡಿದರು.ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಬೇಕು ಎಂದರಲ್ಲದೆ, ಸ್ವತಃ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಮನೋಭಾವನೆಯನ್ನು ಜನರು ಬೆಳೆಸಿಕೊಳ್ಳಬೇಕು ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Share this article