ಕನ್ನಡಪ್ರಭ ಸರಣಿ ವರದಿ ಭಾಗ : 120
ಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ಕೆಮಿಕಲ್- ತ್ಯಾಜ್ಯ ಕಂಪನಿಗಳ ವಿರೋಧಿಸಿ, ಆ ಭಾಗದ ನಾಲ್ಕು ಗ್ರಾಪಂಗಳು ಸಾಮಾನ್ಯ ಸಭೆಯಲ್ಲಿ ಹೊರಡಿಸಿರುವ ಒಮ್ಮತದ ಠರಾವು ಕುರಿತು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿರುವ ಯಾದಗಿರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಸರ್ಕಾರದ ನಿರ್ದೇಶನ ಅನುಸಾರ ಕಂಪನಿಗಳು ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಾಂತ್ರಿಕ ಸಮಿತಿ ನೀಡುವ ನಿರ್ದೇಶನ ಅನುಸಾರ ಕಂಪನಿಗಳನ್ನು ಪ್ರಾರಂಭಿಸಲಾಗಿದೆಯೇ ಎಂಬುವುದನ್ನು ಪರಿಶೀಲಿಸಿ, ನಿರ್ಲಕ್ಷ್ಯ ವಹಿಸಿದ್ದಲ್ಲಿ, ಸಂಬಂಧಪಟ್ಟ ಕಂಪನಿಗಳ ಪರವಾನಗಿ ರದ್ದುಪಡಿಸುವಂತೆ ತಿಳಿಸಿದ್ದಾರೆ.ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಾನಿಲ ಹಾಗೂ ದುರ್ನಾತದಿಂದಾಗಿ ಆ ಭಾಗದ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲೆ, ಪರಿಸರ ಹಾಗೂ ಜೀವ-ಜಲಚರಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇಂತಹ ಕಾರ್ಖಾನೆಗಳ ಪರಿಸರ ಅನುಮತಿಯನ್ನು ರದ್ದುಗೊಳಿಸಿ, ಈ ಅಪಾಯಕಾರಿ ಕಾರ್ಖಾನೆಗಳ ಬಂದ್ ಮಾಡುವಂತೆ ಸಾಮಾನ್ಯ ಸಭೆಯಲ್ಲಿ ಇದೇ ಮೇ 27 ರಂದು ಕಿಲ್ಲನಕೇರಾ ಗ್ರಾಪಂ, ಮೇ 29 ರಂದು ಕಡೇಚೂರು ಗ್ರಾಪಂ, ಜೂ. 16 ರಂದು ಸೈದಾಪುರ ಗ್ರಾಪಂ ಹಾಗೂ ಜೂ.17 ರಂದು ಬಾಡಿಯಾಳ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಠರಾವು ಪಾಸು ಮಾಡಿ, ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
"ಕಡೇಚೂರು : ಬದುಕು ಚೂರು..! ಚೂರು..!! " ಶೀರ್ಷಿಕೆಯಡಿ ಏ.9 ರಿಂದ ಕನ್ನಡಪ್ರಭದಲ್ಲಿ ಈವರೆಗೆ ಪ್ರಕಟಗೊಂಡ ಸರಣಿ ವರದಿಗಳಲ್ಲಿನ ಅನೇಕ ಅಂಶಗಳನ್ನೂ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿರುವ ಲವೀಶ ಒರಡಿಯಾ, ಅಲ್ಲಿನ ಗಂಭೀರತೆಯ ಬಗ್ಗೆ ಗ್ರಾಪಂಗಳ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿರುವ ಕುರಿತು, ಜಿಲ್ಲಾಧಿಕಾರಿಗಳೊಡನೆ ಚರ್ಚಿಸಿ, ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು "ಕನ್ನಡಪ್ರಭ "ಕ್ಕೆ ತಿಳಿಸಿದರು.
ಯಾದಗಿರಿ: ಎರಡು ದಿನಗಳ ಹಿಂದೆ ಕೈಗಾರಿಕಾ ಪ್ರದೇಶದ ಸಮೀಪದ ಕಡೇಚೂರು, ರಾಚೇನಹಳ್ಳಿ ಹಾಗೂ ಶೆಟ್ಟಿಹಳ್ಳಿ ಭಾಗಗಳಲ್ಲಿನ ರಸ್ತೆ ಹಾಗೂ ಹಳ್ಳದ ಸಮೀಪದ ಎಲ್ಲೆಂದರಲ್ಲಿ ಕಪ್ಪನೆಯ ಕೆಮಿಕಲ್ ತ್ಯಾಜ್ಯ ಚೆಲ್ಲಿರುವ ಕುರಿತು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅಲ್ಲಿಗೆ ತೆರಳಿ, ಮಾದರಿ ಸಂಗ್ರಹಿಸಿ ವರದಿ ಸಲ್ಲಿಸಿರುವ ಪರಿಸರ ಇಲಾಖೆಯ ಅಧಿಕಾರಿಗಳು, ಪೊಲೀಸ್ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
-----------------------------
: ಲವೀಶ ಒರಡಿಯಾ,ಸಿಇಓ ಜಿಪಂ, ಯಾದಗಿರಿ.