ಪ್ರತ್ಯೇಕ ಸೇನಾ ತರಬೇತಿ ಟೆಂಡರ್‌ ರದ್ದುಪಡಿಸಿ: ವಿಹಿಂಪ ಆಗ್ರಹ

KannadaprabhaNewsNetwork |  
Published : Nov 20, 2026, 01:45 AM IST
18ಕೆಡಿವಿಜಿ1-ದಾವಣಗೆರೆಯಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಚಂದ್ರಶೇಖರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ನೀಡುವ ಟೆಂಡರ್ ತಕ್ಷಣ ರದ್ದುಪಡಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾ ಘಟಕಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.

- ಅಲ್ಪಸಂಖ್ಯಾತರಿಗೆ 60 ದಿನಗಳ ಸೇನಾ ತರಬೇತಿಗೆ ಆಕ್ಷೇಪ । ಭಾರತೀಯ ಸೇನೆ ದೇಶದ ಅಖಂಡತೆ ಸಂಕೇತ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ನೀಡುವ ಟೆಂಡರ್ ತಕ್ಷಣ ರದ್ದುಪಡಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾ ಘಟಕಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಹಿಂ.ಪ. ವಿಭಾಗ ಕಾರ್ಯದರ್ಶಿ ಚಂದ್ರಶೇಖರ, ಅಲ್ಪಸಂಖ್ಯಾತರ ನಿರ್ದೇಶನಾಲಯವು 2026-27ನೇ ಸಾಲಿನಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ 60 ದಿನಗಳ ಸೇನಾ ತರಬೇತಿ ನೀಡಲು ಅಲ್ಪಾವಧಿ ಟೆಂಡರ್ ಕರೆದಿರುವುದು ಅತ್ಯಂತ ಆಘಾತಕಾರಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದರು.

ಸಾರ್ವಜನಿಕರ ತೆರಿಗೆ ಹಣ ಬಳಸಿ, ಕೇವಲ ಒಂದು ನಿರ್ಧಿಷ್ಟ ಧಾರ್ಮಿಕ ಗುಂಪಿಗೆ ಮಾತ್ರ ರಕ್ಷಣಾ ಸಂಬಂಧಿತ ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಿಂದೂ ಸೇರಿದಂತೆ ಇತರೆ ಸಮುದಾಯಗಳ ಅರ್ಹ ಬಡ ವಿದ್ಯಾರ್ಥಿಗಳು ಇಂತಹ ತರಬೇತಿಯಿಂದ ಹೊರಗಿಡುವುದು ಭಾರತೀಯ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಹಾಗೂ ವಿಧಿ 15(1)ರ (ಧರ್ಮದ ಆಧಾರದ ಮೇಲೆ ತಾರತಮ್ಯ ನಿಷೇಧ)ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.

ಭಾರತೀಯ ಸೇನೆಯು ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಸಂಕೇತವಾಗಿದೆ. ದೇಶ ರಕ್ಷಣೆಗೆ ಸಿದ್ಧರಾಗುವ ಯುವಜನರನ್ನು ಮತದ ಆಧಾರದಲ್ಲಿ ವಿಭಜಿಸಿ, ಪ್ರತ್ಯೇಕ ತರಬೇತಿ ನೀಡುವುದು ರಾಷ್ಟ್ರೀಯ ಏಕೀಕರಣಕ್ಕೆ ಸಂಬಂಧಿಸಿದ ಮೂಲಭೂತ ಕರ್ತವ್ಯಗಳಿಗೆ ನೇರ ವಿರುದ್ಧವಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ಸಂಬಂಧಿಸಿದ ನಿರ್ದೇಶನಾಲಯದ ಯಾವುದೇ ಸಮಾಲೋಚನೆ, ಮೇಲ್ವಿಚಾರಣೆ ಇಲ್ಲದೇ, ಖಾಸಗಿ ಸಂಸ್ಥೆಗಳ ಮೂಲಕ ಮಿಲಿಟರಿ ಮಾದರಿ ತರಬೇತಿ ನೀಡುವುದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಉಂಟು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸಂಘಟನೆ ಮುಖಂಡರಾದ ಶಕುಂತಲಮ್ಮ, ಮಾಲತೇಶ ಗುಪ್ತಾ, ಮಲ್ಲಮ್ಮ, ಬಸವರಾಜಪ್ಪ, ರಾಜೇಶ, ಸಿ.ಎಸ್.ರಾಜು, ಹರೀಶ ಇತರರು ಇದ್ದರು.

- - -

(ಬಾಕ್ಸ್‌)

* ಕಾಯ್ದೆಗಳು ನಿರ್ದಿಷ್ಟ ಧರ್ಮ ಗುರಿಯಾಗಿಸಿ ಇಲ್ಲ: ವಿಹಿಂಪ

ದಾವಣಗೆರೆ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ, ಬಲವಂತ, ಮೋಸ, ಆಮಿಷ ಅಥವಾ ಜನರನ್ನು ದಾರಿ ತಪ್ಪಿಸುವ ಮೂಲಕ ನಡೆಸಲಾಗುವ ಕಾನೂನು ಬಾಹಿರ ಮತಾಂತರಗಳನ್ನು ಮಾತ್ರ ತಡೆಯುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಚಂದ್ರಶೇಖರ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1977ರ ಪ್ರಸಿದ್ಧ ರೆವರೆಂಡ್ ಸ್ಟೇನಿಸ್ಸಾಸ್ ವರ್ಸಸ್ ಮಧ್ಯಪ್ರದೇಶ ಸರ್ಕಾರ ಮೊಕದ್ದಮೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಭಾರತೀಯ ಸಂವಿಧಾನದ ವಿಧಿ 25ರಡಿ ಧರ್ಮ ಪ್ರಚಾರದ ಹಕ್ಕು ಎಂದರೆ ಮತ್ತೊಬ್ಬರನ್ನು ಬಲವಂತವಾಗಿ ಮತಾಂತರ ಮಾಡುವ ಹಕ್ಕು ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದರು.

ಕಾಯ್ದೆಯು ಸಂವಿಧಾನಬದ್ಧವಾಗಿದ್ದು, ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಛತ್ತೀಸಗಢ, ಒಡಿಶಾಗಳಲ್ಲಿ ಕಾಂಗ್ರೆಸ್ ಮತ್ತಿತರ ಮೈತ್ರಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೂ ಈ ಕಾಯ್ದೆಗಳನ್ನು ರದ್ದುಗೊಳಿಸದೆ ಮುಂದುವರಿಸಿವೆ ಎಂದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ.12ರಂದು ಕೆಲ ಸಂಘಟನೆಗಳು ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022 ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ನ್ನು ಹಿಂಪಡೆಯಲು ಪ್ರತಿಭಟಿಸಿದ್ದಾರೆ. ಕೆಲ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಮತ್ತು ಸಂಘಟನೆಗಳ ಇಂತಹ ಒತ್ತಡವನ್ನು ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಬೇಕು. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-222 ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ಗಳನ್ನು ರದ್ದುಪಡಿಸದೇ, ಯಥಾವತ್ ಕಟ್ಟುನಿಟ್ಟಾಗಿ ಮುಂದುವರಿಸಬೇಕು. ಭಾರತೀಯ ಕೃಷಿ ಪದ್ಧತಿಯ ಬೆನ್ನೆಲುಬಾದ ಗೋವುಗಳು ಬಹುಸಂಖ್ಯಾತ ಹಿಂದೂಗಳ ಪವಿತ್ರ ಭಾವನೆಯ ಪ್ರತೀಕವಾಗಿವೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯು ರೈತರ ಹಿತಾಸಕ್ತಿ ಹಾಗೂ ಪಶು ಸಂಪತ್ತಿನ ರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ಚಂದ್ರಶೇಖರ ತಿಳಿಸಿದರು.

- - -

-18ಕೆಡಿವಿಜಿ1: ದಾವಣಗೆರೆಯಲ್ಲಿ ಬುಧವಾರ ವಿಹಿಂಪ ವಿಭಾಗ ಕಾರ್ಯದರ್ಶಿ ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ