Cancellation of Bagarhukum title deed: T.N. Srinivas outraged
ಕನ್ನಡಪ್ರಭ ವಾರ್ತೆ, ಸಾಗರ:
ನಾಡವಳ್ಳಿ ಗ್ರಾಮದಲ್ಲಿ ಐದು ಕುಟುಂಬಗಳಿಗೆ ನೀಡಿದ ಹಕ್ಕುಪತ್ರವನ್ನು ರದ್ದುಪಡಿಸಿದ ಉಪ ವಿಭಾಗಾಧಿಕಾರಿಗಳ ಕ್ರಮ ಅಮಾನವೀಯವಾದದ್ದು. ಕನಿಷ್ಠ ತಿಳಿವಳಿಕೆ ಪತ್ರವನ್ನು ಸಹ ನೀಡದೆ ಏಕಾಏಕಿ ರದ್ದು ಮಾಡಿರುವುದು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡವಳ್ಳಿ ಗ್ರಾಮದ ಸರ್ವೆ ನಂ. ೧೨ರಲ್ಲಿರುವ ೨೭ ಎಕರೆಗೂ ಹೆಚ್ಚಿನ ಸಾಗುವಳಿ, ವಾಸದ ಭೂಮಿಯನ್ನು ಉಪವಿಭಾಗಾಧಿಕಾರಿಗಳು ವಜಾ ಮಾಡಿದ್ದಾರೆ ಎಂದು ಹೇಳಿದರು.ನಾಡವಳ್ಳಿ ಗ್ರಾಮದ ವೆಂಕಟೇಶ್, ಬಸಪ್ಪ, ಮಾಸ್ತ್ಯಮ್ಮ, ರತ್ನಮ್ಮ, ಮಂಜಮ್ಮ ಅವರಿಗೆ ೧೯೯೪ರಲ್ಲಿ ಸರ್ಕಾರ ಬಗರ್ಹುಕುಂ ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಲಾಗಿತ್ತು. ಈ ಕುಟುಂಬಗಳು ಶರಾವತಿ ಮುಳುಗಡೆ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ತಂದು ಬಿಟ್ಟಿದೆ. ಮರಣ ದಂಡನೆ ಶಿಕ್ಷೆ ವಿಧಿಸುವಾಗ ಸಹ ಕನಿಷ್ಠ ನಿಮ್ಮ ಕೊನೆ ಆಸೆ ಏನು ಎಂದು ಕೇಳುತ್ತಾರೆ. ಆದರೆ ನಾಡವಳ್ಳಿ ಗ್ರಾಮದ ಈ ಮುಳುಗಡೆ ಸಂತ್ರಸ್ತ ಐದು ಕುಟುಂಬಗಳಿಗೆ ನೋಟಿಸ್ ಸಹ ನೀಡದೆ ಹಕ್ಕುಪತ್ರ ವಜಾ ಮಾಡಿ, ಈ ಜಮೀನು ಗೋಮಾಳ ಎಂದು ಹೆಸರಿಸಲಾಗಿದೆ. ಜಿಲ್ಲಾಧಿಕಾರಿಗಳು ಸಹ ಈ ಆದೇಶವನ್ನು ಎತ್ತಿ ಹಿಡಿದಿದ್ದು ಖಂಡನೀಯ ಎಂದರು.ತಹಶೀಲ್ದಾರ್ ಅವರು ಈ ಸಂಬಂಧ ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿ ಪುನರ್ ಪರಿಶೀಲನೆ ಅಗತ್ಯ ಎಂದು ಷರಾ ಬರೆದಿದ್ದಾರೆ. ಆದರೆ ಉಪವಿಭಾಗಾಧಿಕಾರಿಗಳು ಯಾವ ರೀತಿಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಮುಂದಿನ ೧೦ ದಿನದೊಳಗೆ ಸ್ಥಳ ಸಮೀಕ್ಷೆ ನಡೆಸಿ ಐದು ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲವಾದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಗ್ರಾಮಸ್ಥರಾದ ಟೀಕಪ್ಪ ಮಾತನಾಡಿ, ನಮ್ಮ ಅಜ್ಜ, ತಂದೆಯವರ ಕಾಲದಿಂದಲೂ ನಾವು ಈ ಜಮೀನಿನಲ್ಲಿ ವಾಸ ಮಾಡುತ್ತಿದ್ದೇವೆ. ನಮ್ಮ ಭೂಮಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾಗಿದೆ. ನಮ್ಮನ್ನು ಸರ್ಕಾರವೇ ಇಲ್ಲಿ ಬಿಟ್ಟು ಹೋಗಿತ್ತು. ಇದೀಗ ಭೂಮಿ ನಮ್ಮದ್ದಲ್ಲ, ಗೋಮಾಳ ಎಂದು ಹೇಳುತ್ತಿರುವುದು ಸರಿಯಲ್ಲ. ತಕ್ಷಣ ನಮ್ಮ ಭೂಮಿಹಕ್ಕು ಮರಳಿಸಬೇಕು. ಇಲ್ಲವಾದಲ್ಲಿ ತಹಶೀಲ್ದಾರ್ ಕಚೇರಿ ಎದುರು ಕುಟುಂಬ ಸಹಿತ ಪ್ರತಿಭಟನೆ ಮಾಡುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೇವಪ್ಪ, ಆದರ್ಶ, ಕೃಷ್ಣಪ್ಪ, ರಾಮಚಂದ್ರ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.