ಬಳಿಕ ತಾಲೂಕು ಕಚೇರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರಿಗೆ ಸಾರ್ವಜನಿಕರು ಕಚೇರಿಯಲ್ಲಿ ಶೌಚಗೃಹ ಸಮಸ್ಯೆ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸೇರಿದಂತೆ ಆರ್.ಟಿ.ಸಿ ಹಾಗೂ ಎಂ.ಆರ್.ತೆಗೆದುಕೊಳ್ಳಲು ಸರ್ವರ್ ಸಮಸ್ಯೆ ಎಂದು ಹೇಳುವ ಸಿಬ್ಬಂದಿ ಉತ್ತರದಿಂದಾಗಿ ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯ ಬಗ್ಗೆ ಉಪ ಲೋಕಾಯಕ್ತರ ಗಮನಕ್ಕೆ ತಂದರು.
ಕನ್ನಡಪ್ರಭ ವಾರ್ತೆ ಮದ್ದೂರು
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ನಗರ ಹಲವೆಡೆ ಭೇಟಿ ನೀಡಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಗರದ ಶ್ರೀ ಗುರುಶಾಂತಪ್ಪ ಸಾರ್ವಜನಿಕರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯಗಳು, ಔಷಧಿ ಸಂಗ್ರಹ ಕೊಠಡಿ, ರೋಗಿಗಳ ವಾರ್ಡ್ ಗಳು, ಶೌಚಾಗೃಹಗಳು ಸೇರಿ ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಮಾಹಿತಿ ಪಡೆದರು.
ಆಸ್ಪತ್ರೆಯಲ್ಲಿ ಹೊರರೋಗಿಗಳು ಹಾಗೂ ಒಳರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಲಭ್ಯತೆ, ಔಷಧಿಗಳ ವಿತರಣೆ, ಅಗತ್ಯ ವೈದ್ಯಕೀಯ ಉಪಕರಣಗಳ ಲಭ್ಯತೆ ಹಾಗೂ ಅವುಗಳ ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಪ್ರತಿಯೊಬ್ಬ ರೋಗಿಗೂ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಸಕಾಲದಲ್ಲಿ ಒದಗಿಸಬೇಕು. ಆರೋಗ್ಯ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ಸೂಕ್ತ ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ಬರುವ ದೂರುಗಳು ಹಾಗೂ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಂತ ತಾವೇ ಬಿಪಿ ಪರೀಕ್ಷೆ ಮಾಡಿಸಿಕೊಂಡು ಬಿಪಿ ಪರೀಕ್ಷಿಸುವ ಯಂತ್ರಗಳನ್ನು ಮೊದಲು ಬದಲಾಯಿಸಲು ಸ್ಥಳದಲ್ಲಿದ್ದ ಆಸ್ಪತ್ರೆ ಆಡಳಿತಾಧಿಕಾರಿಯಾದ ಡಾ.ಬಾಲಕೃಷ್ಣರಿಗೆ ಸೂಚಿಸಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ರಕ್ತ ಪ್ರಯೋಗಾಲಯ ಬಳಿ ಒಂದೇ ಶೌಚಗೃಹ ಇರುವ ಬಗ್ಗೆ ಕೆಂಡಕಾರಿದರು. ಪ್ರತ್ಯೇಕ ಶೌಚಗೃಹದ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.ರಕ್ತ ಪ್ರಯೋಗಾಲಯದಲ್ಲಿ ಅವಧಿ ಮೀರಿದ ಸರ್ಜಿಕಲ್ ಸ್ಪಿರಿಟ್ ಬಳಸುತ್ತಿರುವುದು ಕಂಡು ಕೂಡಲೇ ಅದನ್ನು ಬಳಕೆ ಮಾಡದಂತೆ ಸಿಬ್ಬಂದಿಗೆ ತಿಳಿಸಿದರು. ಆಸ್ಪತ್ರೆ ಹೊರಗೆ ಹಾಗೂ ಔಷಧಿಗಳನ್ನು ನೀಡುವ ಕೌಂಟರ್ ಗಳ ಬಳಿ ಆಸ್ಪತ್ರೆಗೆ ಬರುವ ಹಿರಿಯ ನಾಗರಿಕರಿಗೆ ಸೇರಿದಂತೆ ಸಾರ್ವಜನಿಕರಿಗೆ ಸೂಕ್ತ ಆಸನಗಳ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು.
ಈ ವೇಳೆ ಚನ್ನಸಂದ್ರ ಲಕ್ಷ್ಮಣ ಸೇರಿ ಹಲವರು ಆಸ್ಪತ್ರೆಯಲ್ಲಿನ ವೈದ್ಯರು ಬಹುತೇಕ ಔಷಧಗಳನ್ನು ಹೊರಗಡೆ ಬರೆದುಕೊಡುತ್ತಿದ್ದಾರೆ. ಸಿಬ್ಬಂದಿ ವರ್ತನೆ ಸರಿ ಇಲ್ಲ. ಡಯಾಲಿಸಸ್ ಗೆ ಬರುವ ರೋಗಿಗಳು ಕನಿಷ್ಠ ಮೂರು ತಿಂಗಳು ಕಾಯಬೇಕು ಸೇರಿ ಹಲವು ಸಮಸ್ಯೆಗಳ ಬಗ್ಗೆ ಉಪ ಲೋಕಾಯುಕ್ತರ ಗಮನಕ್ಕೆ ತಂದರು. ಈ ವೇಳೆ ಸಮಂಜಸ ಉತ್ತರ ನೀಡದ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಾಲಕೃಷ್ಣ ಅವರ ಮೇಲೆ ಆಕ್ರೋಶಗೊಂಡರು.ಬಳಿಕ ತಾಲೂಕು ಕಚೇರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರಿಗೆ ಸಾರ್ವಜನಿಕರು ಕಚೇರಿಯಲ್ಲಿ ಶೌಚಗೃಹ ಸಮಸ್ಯೆ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸೇರಿದಂತೆ ಆರ್.ಟಿ.ಸಿ ಹಾಗೂ ಎಂ.ಆರ್.ತೆಗೆದುಕೊಳ್ಳಲು ಸರ್ವರ್ ಸಮಸ್ಯೆ ಎಂದು ಹೇಳುವ ಸಿಬ್ಬಂದಿ ಉತ್ತರದಿಂದಾಗಿ ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯ ಬಗ್ಗೆ ಉಪ ಲೋಕಾಯಕ್ತರ ಗಮನಕ್ಕೆ ತಂದರು.
ಈ ವೇಳೆ ಸ್ಥಳದಲ್ಲೆ ಇದ್ದ ತಹಸೀಲ್ದಾರ್ ಶಿವಕುಮಾರ್ ಬಿರದಾದರ ಅವರನ್ನು ಹತ್ತಿರ ಕರೆದು ಕೂಡಲೇ ಈ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ತಾಕೀತು ಮಾಡಿದರು.ಈ ವೇಳೆ ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಆನ್ ಲೈನ್ ಅಪ್ಲೋಡ್ ಮಾಡದಿರುವುದರ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು ಕಾಲಮಿತಿಯೊಳಗೆ ನಿಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಬೇಕು. ಇಲ್ಲದಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳವುದಾಗಿ ಎಚ್ಚರಿಸಿದರು.
ಬಳಿಕ ಕಚೇರಿಯ ಸರ್ವೇ (ಭೂಮಾಪನ) ವಿಭಾಗಕ್ಕೆ ಭೇಟಿ ನೀಡಿದ ವೇಳೆ ಸಾರ್ವಜನಿಕರ ಜಮೀನುಗಳ ಸರ್ವೇಯ ಕಾರ್ಯಗಳು ಸೇರಿದಂತೆ ಹಲವು ವಿಭಾಗಕ್ಕೆ ಸೇರಿದ ಕೆಲಸ ಕಾರ್ಯಗಳು ವರ್ಷಗಳೇ ಆದರೂ ಆಗದಿರುವುದರ ಬಗ್ಗೆ ಜನರಿಂದ ಮಾಹಿತಿಗಳನ್ನು ಪಡೆದು ಸರ್ವೇ ವಿಭಾಗದ ಎಡಿಎಲ್ಆರ್ ಲಿಖಿತಾರನ್ನು ತರಾಟೆಗೆ ತೆಗೆದುಕೊಂಡರು.ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡಿದರೆ ತಿಂಗಳುಗಟ್ಟಲೆ ಕಚೇರಿಗೆ ಅಲೆಸಿದರೆ ನಿಮಗೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಭೂಮಾಪನ ವಿಭಾಗದಲ್ಲಿ ಸಮವಸ್ತ್ರವಿಲ್ಲದೆ ಬಂದಿದ್ದ ವ್ಯವಸ್ಥಾಪಕ ನಿರಂಜನ್ ಅವರನ್ನು ತರಾಟಗೆ ತೆಗೆದುಕೊಂಡು ಅವರ ಮೊಬೈಲ್ ಅನ್ನು ಪರೀಶೀಲನೆ ನಡೆಸಿದಾಗ ಸಂಬಳಕ್ಕಿಂತ ಹೆಚ್ಚು ಹಣ ವಹಿವಾಟು ನಡೆದಿರುವ ಬಗ್ಗೆ ಪ್ರಶ್ನಿಸಿ ಅವರಿಂದ ಅಗತ್ಯ ಮಾಹಿತಿ ಪಡೆದರು.ಪಕ್ಕದಲ್ಲಿದ್ದ ರೇಕಾರ್ಡ್ ರೂಮ್ಗೆ ತೆರಳಿ ಅಲ್ಲಿಯ ಸಿಬ್ಬಂದಿಯಾದ ಸುನಿಲ್ ಎಂಬುವರು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಪಡೆಯುತ್ತಾರೆ ಎನ್ನುವ ಆರೋಪದ ಹಿನ್ನೆಲೆ ಅವರ ಮೊಬೈಲ್ ನಲ್ಲಿ ಯುಪಿಐ ಹಣ ವರ್ಗಾವಣೆ ಬಗ್ಗೆ ಪರಿಶೀಲನೆ ಮಾಡಿದರು.
ನಂತರ ನಗರದ ಉಪ ನೋಂದಾಣಿಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಹಾಗೂ ಕಚೇರಿಯ ಹಲವು ಅವ್ಯವಸ್ಥೆಗಳ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಮಾಹಿತಿಗಳನ್ನು ಪಡೆದು ಕೂಡಲೇ ಕಚೇರಿಗೆ ಸಿಸಿ ಟಿವಿ ಅಳವಡಿಬೇಕೆಂದು ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಪ್ರಭಾರ ಉಪ ನೋಂದಾಣಿಕಾರಿಯಾದ ಸೌಮ್ಯರಿಗೆ ತಾಕೀತು ಮಾಡಿದರು.ಈ ವೇಳ ಪ್ರಭಾರ ಉಪ ನೋಂದಾಣಿಕಾರಿ ಸೌಮ್ಯ ಅವರ ಮೊಬೈಲ್ ಅನ್ನು ಉಪ ಲೋಕಾಯುಕ್ತರ ಸಿಬ್ಬಂದಿ ಪರಿಶೀಲಿಸಲಾಗಿ ಅವರ ಖಾತೆಯಿಂದ ಯುಪಿಐ ವರ್ಗಾವಣೆ ಮೂಲಕ ಅವರ ಮಾಸಿಕ ಸಂಬಳ 8 ತಿಂಗಳಿಗೆ ಸುಮಾರ ₹4.5 ಲಕ್ಷವಾದರೂ ಈ ಅವಧಿಯಲ್ಲಿ ಸುಮಾರು ₹29.88 ಲಕ್ಷ ಹಣ ವಹಿವಾಟು ನಡೆದಿರುವ ಬಗ್ಗೆ ಬಗ್ಗೆ ಅವರಿಂದ ಮಾಹಿತಿ ಪಡೆದರು.
ಈ ವೇಳೆ ಉಪ ಲೋಕಾಯುಕ್ತಕಚೇರಿಗಳ ಅಧಿಕಾರಿ ವರ್ಗದವರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.