ಚುನಾವಣಾ ಬಾಂಡ್ ರದ್ದು, ಸುಪ್ರೀಂ ತೀರ್ಪು ಸ್ವಾಗತಾರ್ಹ: ಉಡುಪಿ ಕಾಂಗ್ರೆಸ್

KannadaprabhaNewsNetwork | Published : Feb 19, 2024 1:33 AM

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ 2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡುಗಳು ಲಂಚದ ಮತ್ತೊಂದು ರೂಪವಾಗಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಐತಿಹಾಸಿಕ ಮತ್ತು ಈ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಹೇಳಿದ್ದಾರೆ.ಈ ಬಾಂಡ್ ಯೋಜನೆ ಮೂಲಕ ಆಡಳಿತರೂಢ ಬಿಜೆಪಿ 6,566 ಕೋಟಿ ರು. ಗಳಿಸಿದೆ, ಆದರೆ ಅದೇ ಸಮಯದಲ್ಲಿ ಪ್ರಮುಖ ವಿಪಕ್ಷವಾದ ಕಾಂಗ್ರೆಸ್ 1,123 ಕೋಟಿ ರು. ಗಳಿಸಿದೆ ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಬಂಡವಾಳಶಾಹಿಗಳಿಂದ ಚುನಾವಣೆಗಾಗಿ ದೇಣಿಗೆ ಸಂಗ್ರಹಿಸುವ ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಜಾರಿಗೆ ತಂದಿದ್ದು ಇದರಿಂದ ದೇಣಿಗೆಯ ಹೆಚ್ಚಿನ ಭಾಗವು ಕೇಂದ್ರದಲ್ಲಿರುವ ಆಡಳಿತ ಪಕ್ಷಕ್ಕೆ ಹರಿದು ಬಂದಿದೆ. ಕೇಂದ್ರ ಬಿಜೆಪಿ ಸರ್ಕಾರ 2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡುಗಳು ಲಂಚದ ಮತ್ತೊಂದು ರೂಪವಾಗಿತ್ತು ಎಂದವರು ಆರೋಪಿಸಿದ್ದಾರೆ.ಈ ಬಾಂಡ್‌ಗಳಿಗಾಗಿ ಕೇಂದ್ರ 5 ಕಾಯ್ದೆಗಳನ್ನೇ ತಿದ್ದುಪಡಿ ಮಾಡಿತ್ತು. ಆದರೆ ಇದು ಅಸಾಂವಿಧಾನಿಕ, ಮಾತ್ರವಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ. ಚುನಾವಣಾ ಬಾಂಡ್ ಯೋಜನೆಯಡಿ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಯಾವುದೇ ಮಿತಿ ಇಲ್ಲದೆ ದೇಣಿಗೆ ನೀಡಬಹುದಾಗಿದ್ದರಿಂದ ಬಂಡವಾಳಶಾಹಿ ಶಕ್ತಿಗಳು ಹಾಗೂ ಆಡಳಿತರೂಢ ಸರ್ಕಾರಗಳ ನಡುವೆ ಕೊಡುಕೊಳ್ಳುವಿಕೆ ಸಂಬಂಧ ಏರ್ಪಡುತ್ತದೆ ಎಂದವರು ವಿಶ್ಲೇಷಿಸಿದ್ದಾರೆ.ಬಿಜೆಪಿ ಸರ್ಕಾರದ ಈ ವ್ಯವಸ್ಥೆಯಿಂದ ಭ್ರಷ್ಟಾಚಾರ ಕಡಿಮೆಯಾಗಿಲ್ಲ, ಆದರೆ ಕಣ್ಣಿಗೆ ಕಾಣುವಂತಿರಲಿಲ್ಲ. ಸುಪ್ರೀಂ ಕೋರ್ಟಿನ ಈ ತೀರ್ಪು ಕೇಂದ್ರ ಸರ್ಕಾರದ ಸಂಚಿಗೆ ಹಿಡಿದ ಕನ್ನಡಿಯಾಗಿದ್ದು, ಅದು ಬಯಲಾಗಿದೆ. ಬಿಜೆಪಿ ಕದ್ದು ಮುಚ್ಚಿ ಮಾಡುತ್ತಿರುವ ಭಷ್ಟಾಚಾರಕ್ಕೆ ಕೋರ್ಟ್ ಕಡಿವಾಣ ಹಾಕಿರುವುದು ಶ್ಲಾಘನೀಯ ಎಂದು ಭಾಸ್ಕರ ರಾವ್ ಹೇಳಿದ್ದಾರೆ.

Share this article