ಸಿಂಗಟಾಲೂರು ನೀರಾವರಿ ಯೋಜನಾ ವ್ಯಾಪ್ತಿಯಲ್ಲಿ ಸೋಲಾರ್‌ಗೆ ಭೂಮಿ ಮಂಜೂರಾತಿ ರದ್ದು?

KannadaprabhaNewsNetwork | Published : Jul 14, 2024 1:35 AM

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರದೇಶ ವ್ಯಾಪ್ತಿಯಲ್ಲಿ ಸೋಲಾರ್ ಕಂಪನಿಗೆ ನೀಡಲು ಭೂ ಪರಿವರ್ತನೆ ಮಾಡದಂತೆ ಇಂಧನ ಅಭಿವೃದ್ಧಿ ನಿಗಮ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗೆ ಕರ್ನಾಟಕ ನೀರಾವರಿ ನಿಗಮ ಪತ್ರ ಬರೆದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರದೇಶ ವ್ಯಾಪ್ತಿಯಲ್ಲಿ ಸೋಲಾರ್ ಕಂಪನಿಗೆ ನೀಡಲು ಭೂ ಪರಿವರ್ತನೆ ಮಾಡದಂತೆ ಇಂಧನ ಅಭಿವೃದ್ಧಿ ನಿಗಮ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗೆ ಕರ್ನಾಟಕ ನೀರಾವರಿ ನಿಗಮ ಪತ್ರ ಬರೆದಿದೆ.

ಸಾವಿರಾರು ಕೋಟಿ ವ್ಯಯ ಮಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿ ಮಾಡಲಾಗುತ್ತಿದೆ. ಇನ್ನೇನು ಮುಕ್ತಾಯದ ಹಂತದಲ್ಲಿರುವ ವೇಳೆಯಲ್ಲಿ ಯೋಜನಾ ಪ್ರದೇಶ ವ್ಯಾಪ್ತಿಯ ಭೂಮಿಯನ್ನು ಸೋಲಾರ್ ಕಂಪನಿಗೆ ನೀಡಲು ಭೂ ಪರಿವರ್ತನೆ ಮಾಡಿರುವುದು ಕಾನೂನುಬಾಹಿರವಾಗಿದೆ. ಈಗಾಗಲೇ ಭೂ ಪರಿವರ್ತನೆ ಮಾಡಿರುವುದನ್ನು ಕೂಡಲೇ ರದ್ದು ಮಾಡಬೇಕು ಮತ್ತು ಇನ್ಮುಂದೆ ಮಾಡುವಂತಿಲ್ಲ ಎಂದು ಖಡಕ್‌ ಪತ್ರ ಬರೆದಿದೆ.

ನೀರಾವರಿ ಯೋಜನಾ ವ್ಯಾಪ್ತಿಯ ಪ್ರದೇಶದಲ್ಲಿ ಭೂ ಪರಿವರ್ತನೆ ಮಾಡುವ ಮುನ್ನ ಕನಿಷ್ಠ ನಮ್ಮ ಗಮನಕ್ಕೆ ತರಬೇಕಿತ್ತು. ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಈಗಾಗಲೇ ರೈತರ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಭೂಮಿ ಪರಿವರ್ತನೆ ಮಾಡಲಾಗಿದೆ. ಅದಲ್ಲದೆ ಇನ್ನೂ ಮಾಡುತ್ತಲೇ ಇದ್ದೀರಿ, ಇದು ಸರಿಯಲ್ಲ. ಕೂಡಲೇ ಈಗಾಗಲೇ ಭೂ ಪರಿವರ್ತನೆ ಮಾಡಿರುವುದನ್ನು ರದ್ದು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಅಷ್ಟೇ ಅಲ್ಲ, ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿ ಸೋಲಾರ್ ಪ್ಲಾಂಟ್ ಹಾಕಲು ಅನುಮತಿ ನೀಡಿರುವುದು ಸರಿಯಲ್ಲ, ಇದನ್ನು ಪರಾಮರ್ಶೆ ಮಾಡುವಂತೆಯೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೂ ತಿಳಿಸಲಾಗಿದೆ.

ಈ ಮೂಲಕ ಸಿಂಗಟಾಲೂರು ಯೋಜನಾ ವ್ಯಾಪ್ತಿಯಲ್ಲಿ ಸೋಲಾರ್ ಪ್ಲಾಂಟ್ ಹಾಕುವ ಕಾರ್ಯಕ್ಕೆ ಬ್ರೇಕ್ ಬೀಳಲಿದೆ.

ಏನಿದು ಸಮಸ್ಯೆ?: ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಈಗಾಗಲೇ ₹5768 ಕೋಟಿ ವೆಚ್ಚ ಮಾಡಲಾಗಿದೆ. ಸಿಂಗಟಾಲೂರು ಜಲಾಶಯ ನಿರ್ಮಾಣ ಮಾಡಲಾಗಿದೆ. ಇದರಿಂದ ವಿಜಯನಗರ ಜಿಲ್ಲೆಯ ಹಡಗಲಿ, ಗದಗ ಜಿಲ್ಲೆಯ ಮುಂಡರಗಿ ಹಾಗೂ ಕೊಪ್ಪಳ ಜಿಲ್ಲೆಯ ಕೊಪ್ಪಳ ಮತ್ತು ಕುಕನೂರು ತಾಲೂಕು ವ್ಯಾಪ್ತಿಯಲ್ಲಿ 2,65,229 ಎಕರೆ ನೀರಾವರಿ ಪ್ರದೇಶ ಗುರುತಿಸಲಾಗಿದೆ. ಇದರಲ್ಲಿ ಈಗಾಗಲೇ ಹಡಗಲಿ ಮತ್ತು ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ 48,381 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ.

ಉಳಿದಂತೆ ಗದಗ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಮಾಡಲು 72 ಕಿಮೀ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕು ಮತ್ತು ಕುಕನೂರು ತಾಲೂಕು ವ್ಯಾಪ್ತಿಯಲ್ಲಿ 120 ಎಕರೆ ಪ್ರದೇಶ ಮಾದರಿ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುತ್ತದೆ. ಕಾಮಗಾರಿ ಪ್ರಗತಿಯಲ್ಲಿದೆ.

ವಾಸ್ತವ ಹೀಗಿದ್ದರೂ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವ್ಯಾಪ್ತಿಗೆ ಒಳಪಡುವ ಭೂಮಿಯಲ್ಲಿಯೇ ಈಗ ಕಾನೂನುಬಾಹಿರವಾಗಿ ಸೋಲಾರ್ ಪ್ಲಾಂಟ್‌ ಹಾಕಲಾಗುತ್ತಿದೆ. ಇದಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಭೂ ಪರಿವರ್ತನೆಗೆ ಅವಕಾಶ ನೀಡಿದ್ದಾರೆ. ಇದನ್ನು ಕೂಡಲೇ ತಡೆಯುವಂತೆ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಕೊಪ್ಪಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ನ್ಯಾಯಾಲಯದ ಮೊರೆ: ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಗುತ್ತಿಗೆ ಕಾರ್ಯನಿರ್ವಹಿಸುತ್ತಿರುವವರಿಗೆ ಸೋಲಾರ್ ಪ್ಲಾಂಟ್ ಅಡ್ಡಿಯಾಗುತ್ತಿದ್ದು, ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ ಎನ್ನುವುದನ್ನು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸೋಲಾರ್ ಪ್ಲಾಂಟ್‌ ಹಾಕಲು ಅನುಮತಿ ನೀಡಿರುವುದು ಕಾನೂನುಬಾಹಿರ. ನೀರಾವರಿ ಪ್ರದೇಶದಲ್ಲಿ ಭೂ ಪರಿವರ್ತನೆ ಮಾಡಿ, ಅನುಮತಿ ನೀಡಿರುವುದು ಕಾನೂನು ಪ್ರಕಾರ ತಪ್ಪು. ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಹೋರಾಟಗಾರ ವೈ.ಎನ್. ಗೌಡರ ಹೇಳುತ್ತಾರೆ.ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸೋಲಾರ್ ಪ್ಲಾಂಟ್‌ಗೆ ಭೂಮಿ ನೀಡಿರುವುದು ಕಾನೂನುಬಾಹಿರ ಎನ್ನುವುದು ನೀರಾವರಿ ನಿಗಮದ ಪತ್ರದಲ್ಲಿಯೇ ಉಲ್ಲೇಖ ಮಾಡಲಾಗಿದೆ. ಇದನ್ನು ತಡೆಯುವುದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರೈತ ಮುಖಂಡ ಎಸ್.ವಿ. ಸೋಮರಡ್ಡಿ ಹೇಳುತ್ತಾರೆ.

Share this article