ಹೊರ ಗುತ್ತಿಗೆ ರದ್ಧು, ಏಜೆನ್ಸಿ ಮುಕ್ತಗೊಳಿಸಲು ಪ್ರತಿಭಟನೆ

KannadaprabhaNewsNetwork | Published : Dec 6, 2024 8:55 AM

ಸಾರಾಂಶ

ಬೀದರ್ ಮಾದರಿಯ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಎಐಯುಟಿಯುಸಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆಬೀದರ್ ಮಾದರಿಯ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಎಐಯುಟಿಯುಸಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಘದ ನೇತೃತ್ವದಲ್ಲಿ ಹೊರ ಗುತ್ತಿಗೆ ರದ್ಧುಗೊಳಿಸಿ, ಏಜೆನ್ಸಿಯಿಂದ ಮುಕ್ತಗೊಳಿಸುವ ಜೊತೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೊಸೈಟಿ ರಚಿಸಲು ಒತ್ತಾಯಿಸಿ ಸಂಯುಕ್ತ ವಸತಿ ನಿಲಯಗಳ ಹೊರ ಗುತ್ತಿಗೆ ನೌಕರರು ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸಂಘದ ಮುಖಂಡ ಮಂಜುನಾಥ ಕೈದಾಳೆ, ಹೊರ ಗುತ್ತಿಗೆ ರದ್ಧುಗೊಳಿಸಿ, ಏಜೆನ್ಸಿಗಳಿಂದ ಮುಕ್ತಗೊಳಿಸಬೇಕು. ಬೀದರ್ ಮಾದರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಬೇಕು. ಹೊರ ಗುತ್ತಿಗೆ ಏಜೆನ್ಸಿಗಳಿಂದ ಆಗುತ್ತಿರುವ ಅಕ್ರಮಗಳು, ಅನ್ಯಾಯ ತಡೆಗೆ ಕಾರ್ಮಿಕ ಸಚಿವರು, ರಾಜ್ಯ ಸರ್ಕಾರ ಹೊರ ಗುತ್ತಿಗೆ ಏಜೆನ್ಸಿಗಳ ಬದಲಿಗೆ, ಡಿಸಿ ನೇತೃತ್ವದ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಣಕಾಸು ಇಲಾಖೆ ಅನುಮತಿ ಸಹ ನೀಡಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳು, ವಸತಿ ಶಾಲೆಗಳಲ್ಲಿ ಅನೇಕ ವರ್ಷಗಳಿಂದಲೂ ಹೊರ ಗುತ್ತಿಗೆ ಆಧಾರದಲ್ಲಿ ಅಡುಗೆ ಮಾಡುವವರು, ಅಡುಗೆ ಸಹಾಯಯಕರು, ರಾತ್ರಿ ಕಾವಲುಗಾರರಿಗೆ ಕಾರ್ಯ ನಿರ್ವಹಿಸುತ್ತಿರುವ ನೂರಾರು ಕಾರ್ಮಿಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು. ಕಾರ್ಮಿಕರಿಗೆ ವೇತನ, ಪಿಎಫ್‌, ಇಎಎಸ್‌ಐ, ನೇಮಕಾತಿ ಪತ್ರ ಗುರುತಿನ ಪತ್ರ, ವೇತನ ರಸೀದಿ, ರಜೆ ಸೌಲಭ್ಯಗಳು ಕಾಲಕಾಲಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಅವರು ದೂರಿದರು.

ಗುತ್ತಿಗೆದಾರರು ಕಾರ್ಮಿಕರಿಗೆ ವೇತನ, ಪಿಎಫ್‌, ಇಎಸ್‌ಐ ಕೊಡುವುದರಲ್ಲಿ ವಂಚಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಸಲ ಸರ್ಕಾರದ ಗಮನಕ್ಕೆ ತಂದಾಗಲೂ ಸಮಸ್ಯೆ ಬಗೆಹರಿದಿಲ್ಲ. ಹೊರ ಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯನ್ವಯ ನಿಗದಿಯಾದ ಶಾಸನಬದ್ಧ ಸೌಲಭ್ಯಗಳನ್ನು ಸಹ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಏಜೆನ್ಸಿಗಳ ಅಕ್ರಮಗಳು, ಅನ್ಯಾಯ ತಡೆಗೆ ಸರ್ಕಾರ ಮುಂದಾಗಬೇಕು. ಹೊರ ಗುತ್ತಿಗೆ ಏಜೆನ್ಸಿ ಬದಲಿಗೆ, ಡಿಸಿ ನೇತೃತ್ವದ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿ, ಕಾರ್ಮಿಕರಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು. ಹೊರ ಗುತ್ತಿಗೆ ಕಾರ್ಮಿಕರಿಗೆ ನ್ಯಾಯವೊದಗಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ರಚಿಸಬೇಕು. ಸಂಘದ ಮೂಲಕ ಗುತ್ತಿಗೆ ನೌಕರರಿಗೆ ಕಾರ್ಮಿಕ ಇಲಾಖೆ ನಿಯಮಾನುಸಾರ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಆಗಬೇಕು ಎಂಬುದಾಗಿ ಒತ್ತಾಯಿಸಿ ಜಿಲ್ಲಾ ಆಡಳಿತಕ್ಕೆ ಸಂಘಟನೆ ಮುಖಂಡ ಮಂಜುನಾಥ ಕೈದಾಳೆ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. ಸಂಘಟನೆ ಮುಖಂಡರಾದ ಸ್ವಾಮಿ ನಿಂಗಪ್ಪ, ಹರಿಹರ ಈಶ್ವರ, ರವಿನಾಯ್ಕ, ನಿಂಗಪ್ಪ ಸಿದ್ದಮ್ಮನಹಳ್ಳಿ, ಮಂಜುಳಮ್ಮ, ಮನೋಹರ, ನವೀನ, ಶಾಂತಕುಮಾರ ಹೊನ್ನಾಳಿ, ರತ್ನಮ್ಮ ಇತರರು ಇದ್ದರು.

Share this article