ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲೆಯ ಅನುದಾನ ರಹಿತ ಅಥವಾ ಅನುದಾನಿತ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿಗಾಗಿ ಯಾವುದೇ ರೀತಿಯ ಡೊನೇಷನ್ ಪಡೆಯುವಂತಿಲ್ಲ. ಒಂದು ವೇಳೆ ಕಾನೂನು ಬಾಹಿರವಾಗಿ ದೇಣಿಗೆ ಪಡೆದಿರುವುದು ಕಂಡುಬಂದಲ್ಲಿ ಅಂತಹ ಶಾಲೆಗಳ ನೋಂದಣಿ ರದ್ದುಗೊಳಿಸಿ, ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಎಚ್ಚರಿಕೆ ನೀಡಿದ್ದಾರೆ.ಪ್ರಸಕ್ತ ಶೈಕ್ಷಣಿಕ ಸಾಲಿಗೆ ಇಂದಿನಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ, ಕೆಲವು ಶಾಲೆಗಳಲ್ಲಿ ಡೊನೇಷನ್ ಪಡೆಯಲಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬಂದಿರುವುದರಿಂದ ಎಚ್ಚರಿಕೆ ನೀಡಿದ್ದಾರೆ.
ನಿಯಮಾವಳಿಗಳನ್ವಯ ಸರ್ಕಾರವು ನಿಗಧಿಪಡಿಸಲಾದ ಶುಲ್ಕ ಮಾತ್ರ ಪಡೆದುಕೊಂಡು ಪ್ರವೇಶಾತಿ ನೀಡಬೇಕು, ಒಂದು ವೇಳೆ ಕಾನೂನು ಬಾಹಿರವಾಗಿ ಡೊನೇಷನ್ ಪಡೆದರೆ ಆರ್.ಟಿ.ಇ ಕಾಯ್ದೆ ಪ್ರಕಾರ ಅಂತಹ ಶಾಲೆಗಳ ನೋಂದಣಿ ರದ್ದುಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪಾಲಕರು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರತಿಯೊಂದು ಶಾಲೆಯು ತನ್ನ ಸೂಚನಾ ಫಲಕದಲ್ಲಿ ಪ್ರವೇಶ ಶುಲ್ಕ ಕುರಿತು ಸ್ಪಷ್ಟ ಮಾಹಿತಿ ಪ್ರದರ್ಶಿಸಬೇಕು. ಶಿಕ್ಷಣ ಹಕ್ಕು ಕಾಯ್ದೆ ೨೦೦೯ರ ಸೆಕ್ಷೆನ್(೨)ಬಿ ನಂತೆ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿರುವ ಶುಲ್ಕ ಶಾಲೆಯ ಅಧಿಕೃತ ಅಂರ್ತಜಾಲತಾಣ, ಶಾಲಾ ನೋಟೀಸ್ ಬೋರ್ಡ್ ಹಾಗೂ ಎಸ್.ಎ.ಟಿ.ಎಸ್. ಇಲಾಖಾ ಅಂರ್ತಜಾಲತಾಣಗಳಲ್ಲಿ ಪೋಷಕರು ಮತ್ತು ಸಾರ್ವಜನಿಕರಿಗೆ ಶುಲ್ಕದ ಬಗ್ಗೆ ಮಾಹಿತಿ ಲಭ್ಯವಾಗುವಂತೆ ಪ್ರಕಟಿಸಬೇಕು. ಇದರಿಂದ ಪಾಲಕರು ಮತ್ತು ಸಾರ್ವಜನಿಕರಿಗೆ ಪ್ರವೇಶ ಶುಲ್ಕದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ ಮತ್ತು ಪ್ರವೇಶ ಪ್ರಕ್ರಿಯೆ ಕುರಿತ ಗೊಂದಲ ನಿವಾರಣೆಯಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಶಾಲೆಯು ಡೊನೇಷನ್ ಕೇಳಿದರೆ ಅಥವಾ ಡೊನೇಷನ್ ಪಡೆದುಕೊಂಡರೆ ಜಿಲ್ಲಾಧಿಕಾರಿ ಕಚೇರಿ ಅಥವಾ ಡಿಡಿಪಿಐ ಕಚೇರಿಗೆ ಸಾರ್ವಜನಿಕರು ದೂರು ಸಲ್ಲಿಸಬಹುದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.ಸಾರ್ವಜನಿಕರ ದೂರು ಆಧರಿಸಿ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.