ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

KannadaprabhaNewsNetwork |  
Published : Jul 31, 2025, 01:27 AM IST
ಕ್ಯಾ.ಬ್ರಿಜೇಶ್‌ ಚೌಟ | Kannada Prabha

ಸಾರಾಂಶ

ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕೇಂದ್ರ ಸರ್ಕಾರವು ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದಕ್ಕಾಗಿ 1.49 ಕೋಟಿ ರು.ವರೆಗೆ ಅನುದಾನ ಮೀಸಲಿರಿಸಿದೆ.

ಮಂಗಳೂರು: ಕೇಂದ್ರ ಸರ್ಕಾರವು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದಕ್ಕಾಗಿ 1.49 ಕೋಟಿ ರು.ವರೆಗೆ ಅನುದಾನ ಮೀಸಲಿಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ನಗರ- ಗ್ರಾಮೀಣ ಅಸಮಾನತೆ ಕಡಿಮೆ ಮಾಡಿ, ಪರಿಣಾಮಕಾರಿ ಶುಶ್ರೂಶೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2025-26ರ ಕೇಂದ್ರ ಬಜೆಟ್‌ನಲ್ಲಿ ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇ ಕೇರ್ ಸ್ಥಾಪಿಸುವ ಘೋಷಣೆ ಮಾಡಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಅಡಿಯಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲು ಜಿಲ್ಲೆಗೆ ₹ 1.49 ಕೋಟಿ ರು.ವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತಾವಿತ ಕೇಂದ್ರವು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ರೋಗ ನಿರ್ಣಯ, ಕೀಮೋಥೆರಪಿ, ಆರೈಕೆ, ಕ್ಯಾನ್ಸರ್ ತಡೆಗಟ್ಟುವಿಕೆ- ಜಾಗೃತಿ ಕಾರ್ಯಕ್ರಮ ಮತ್ತು ಚಿಕಿತ್ಸಾ ಸೇವೆಗಳ ಜತೆಗೆ ಇತರ ಬೆಂಬಲ ಸೇವೆಗಳನ್ನು ಒದಗಿಸಲಿದೆ. ಜನರಿಗೆ ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ಒದಗಿಸುವುದು ಮತ್ತು ತೃತೀಯ ಹಂತದ ಆರೈಕೆ ಕೇಂದ್ರಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ.ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಇದು ಒಂದು ಸಕಾಲಿಕ ನಿರ್ಧಾರ. ಮಂಗಳೂರಿನಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್ ಸ್ಥಾಪನೆಯು ಶ್ರೇಣಿ 2 ಮತ್ತು 3ನೇ ಹಂತದ ನಗರಗಳಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸುವ ಪ್ರಧಾನಮಂತ್ರಿ ಮೋದಿ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಡೇ ಕೇರ್ ಸೆಂಟರ್‌ನಲ್ಲಿ ಕ್ಯಾನ್ಸರ್ ಪೀಡಿತರಿಗೆ ಸ್ಥಳೀಯವಾಗಿ ಆರೈಕೆ ಒದಗಿಸುವುದರಿಂದ ರೋಗಿಗಳು ದೂರದ ನಗರಗಳಿಗೆ ಪ್ರಯಾಣಿಸುವ ತೊಂದರೆ ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಈ ಸೆಂಟರ್ ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನೂರಾರು ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾಗಲಿದೆ ಎಂದು ಕ್ಯಾ. ಬ್ರಿಜೇಶ್‌ ಚೌಟ ಶ್ಲಾಘಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ