ಕನ್ನಡಪ್ರಭ ವಾರ್ತೆ ಮೂಲ್ಕಿ
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅರ್ಚಕರ ಪಾತ್ರ ಮಹತ್ತರವಾಗಿದ್ದು, ದೇವರ ಮತ್ತು ಭಕ್ತರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ತೆರೆ ಮರೆಯ ಅರ್ಚಕರನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದು ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಹೇಳಿದರು.ಮೂಲ್ಕಿಯ ಹೊಸ ಅಂಗಣ ಮಾಸ ಪತ್ರಿಕೆಯ ಆಶ್ರಯದಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಜರುಗಿದ ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಅರ್ಚಕರು ಸಮಾಜದ ಆಸ್ತಿಯಾಗಿದ್ದು, ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವೆಂದು ಹೇಳಿದರು.ಕಾರ್ಯಕ್ರಮದಲ್ಲಿ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರನ್ನು ಗೌರವಿಸಲಾಯಿತು.
ಮೂಲ್ಕಿ ಬಿಲ್ಲವ ಸಂಘ ಅಧ್ಯಕ್ಷ ವಾಮನ್ ಕೋಟ್ಯಾನ್, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಬಿರುವೆರ್ ಕುಡ್ಲ ಮೂಲ್ಕಿ ಘಟಕ ಅಧ್ಯಕ್ಷ ಉಮೇಶ್ ಮಾನಂಪಾಡಿ, ಕಥಾ ಬಿಂದುವಿನ ಪಿ.ವಿ. ಪ್ರದೀಪ್ ಕುಮಾರ್, ತೋಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಪುಷ್ಪರಾಜ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಕೇಶಾವನಂದ ಗುರೂಜಿ, ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ಹಬೀಬುಲ್ಲಾ, ಎ.ಜಯಪಾಲ ಶೆಟ್ಟಿ, ರವಿಚಂದ್ರ ಮತ್ತಿತರರಿದ್ದರು.
ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಹರೀಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ವಂದಿಸಿದರು. ವೈ.ಎನ್. ಸಾಲ್ಯಾನ್ ನಿರೂಪಿಸಿದರು.