ಕ್ಯಾನ್ಸರ್ ಭಯಾನಕವಲ್ಲ, ಸಂಪೂರ್ಣ ಗುಣಪಡಿಸಬಹುದು

KannadaprabhaNewsNetwork | Published : Mar 9, 2025 1:50 AM

ಸಾರಾಂಶ

ಅತ್ಯಾಧುನಿಕ ಹೊಸ ಆವಿಷ್ಕಾರಗಳೊಂದಿಗೆ ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಅದನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಕಾಯಿಲೆ ಒಂದು ಭಯಾನಕ ಕಾಯಿಲೆಯಾಗಿ ಉಳಿದಿಲ್ಲ. ಅತ್ಯಾಧುನಿಕ ಹೊಸ ಆವಿಷ್ಕಾರಗಳೊಂದಿಗೆ ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಅದನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ ಎಂದು ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದರು.

ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ, ಪಿಎಂಎನ್ಎಂ ಡೆಂಟಲ್ ಕಾಲೇಜು ಮತ್ತು ಹುಬ್ಬಳ್ಳಿಯ ಹೆಲ್ತ್‌ಕೇರ್‌ ಗ್ಲೋಬಲ್ ಎಂಟರ್ಪ್ರೈಜೆಸ್ (ಎಚ್‌ಸಿಜಿ) ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಒಂದು ದಿನದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜನರು ಯಾವುದೇ ಪ್ರಕಾರದ ಗಡ್ಡೆಗಳನ್ನು ನಿರ್ಲಕ್ಷಿಸದೆ ಆಸ್ಪತ್ರೆಗೆ ಬಂದು ತಜ್ಞವೈದ್ಯರಿಂದ ಸೂಕ್ತ ತಪಾಸಣೆಗೆ ಒಳಪಟ್ಟು ಕ್ಯಾನ್ಸರ್ ಕಾಯಿಲೆ ಪತ್ತೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ಕಾಯಿಲೆ ಪ್ರಾಥಮಿಕ ಹಂತದಲ್ಲಿದ್ದರೆ ಅದನ್ನು ಸಂಪೂರ್ಣವಾಗಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಲು ಪ್ರತಿಯೊಬ್ಬರು ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಸರಿಯಾದ ಕ್ರಮದಲ್ಲಿ ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ತಂಬಾಕು ಹಾಗೂ ತಂಬಾಕು ಉತ್ಪಾದಿತ ವಸ್ತುಗಳಾದ ಬೀಡಿ, ಸಿಗರೇಟ್, ಗುಟಕಾ ಮತ್ತು ಪಾನ ಮಸಾಲಾದಂತಹ ವಸ್ತುಗಳ ಸೇವನೆ ಸಂಪೂರ್ಣವಾಗಿ ತ್ಯಜಿಸಬೇಕು. ಪೌಷ್ಠಿಕ ಆಹಾರದ ಸೇವನೆ, ನಿಯಮಿತ ವ್ಯಾಯಾಮ ಹಾಗೂ ವೈಯಕ್ತಿಕ ಶುಚಿತ್ವದಿಂದ ಕೂಡಿದ ಜೀವನ ಶೈಲಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಈ ಕುರಿತು ವೈದ್ಯರು ಕೂಡಾ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ತಜ್ಞವೈದ್ಯರು ಪ್ರತಿ ಶುಕ್ರವಾರ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಯಾವುದೇ ಪ್ರಕಾರದ ಕ್ಯಾನ್ಸರ್ ಕಾಯಿಲೆ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಕುಮಾರೇಶ್ವರ ಆಸ್ಪತ್ರೆಯು ತಪಾಸಣೆಗಾಗಿ ಹಾಗೂ ಚಿಕಿತ್ಸೆಗಾಗಿ ಎಲ್ಲ ತರಹದ ಅತ್ಯಾಧುನಿಕ ಉಪಕರಣಗಳು ಹಾಗೂ ಅನುಭವಿ ತಜ್ಞವೈದ್ಯರನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಯಾಗಿದೆ. ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಅತ್ಯಾಧುನಿಕ ಸೌಲಭ್ಯಗಳು ಹೊಂದಿದೆ ಎಂದು ಹೇಳಿದರು.

ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಡಾ.ನಾರಾಯಣ ಮುತಾಲಿಕ್, ಡೆಂಟಲ್ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ, ಡಾ.ಕಾಶಿನಾಥ ಅರಬ್ಬಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ದಿಲೀಪ ನಾಟೇಕರ, ಡಾ.ಅಶೋಕ ಬಡಕಲಿ, ಡಾ.ಬ್ರಿಜೇಶ ಪಾಟೀಲ, ಡಾ.ವೀರಭದ್ರಪ್ಪ ಕುಪ್ಪಸ್ತ, ಡಾ.ಅಮರೇಶ ದೇಗಿನಾಳ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವೈದ್ಯರು ಉಪಸ್ಥಿತರಿದ್ದರು.

ಶಿಬಿರಕ್ಕೆ ಬಾಗಲಕೋಟೆ ಸೇರಿದಂತೆ ನೆರೆಯ ಊರಿನಿಂದ ತಪಾಸಣೆಗಾಗಿ ಸುಮಾರು 100ಕ್ಕೂ ಹೆಚ್ಚು ರೋಗಿಗಳು ಆಗಮಿಸಿದ್ದರು. ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ತಜ್ಞವೈದ್ಯರಾದ ಡಾ.ಮಿಲಿಂದ ಶೆಟ್ಟಿ, ಕುಮಾರೇಶ್ವರ ಆಸ್ಪತ್ರೆ ಒಬಿಜಿ ವಿಭಾಗದ ಡಾ.ಆಶಾಲತಾ ಮಲ್ಲಾಪೂರ, ಸರ್ಜರಿ ವಿಭಾಗದ ಡಾ.ಈಶ್ವರ ಕಲಬುರ್ಗಿ, ಇಎನ್‌ಟಿ ವಿಭಾಗದ ಡಾ.ಸಿ.ಎಸ್.ಹಿರೇಮಠ, ಡೆಂಟಲ್ ಕಾಲೇಜಿನ ಡಾ.ಪ್ರವೀಣ ರಾಮದುರ್ಗ, ಡಾ.ಸೌಮ್ಯಾ ಮತ್ತು ಡಾ.ಲಿಂಗರಾಜ ಹರಿಹರ ಅವರು ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ಕಾಯಿಲೆ ತಪಾಸಣೆ ಮಾಡಿದರು.

Share this article