ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಂಹಪಾಲು ನೀಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ಲಕ್ಷ ಕೋಟಿ ಬಜೆಟ್‌ನಲ್ಲಿ 53,117 ಕೋಟಿ ರು.ಗಳನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿಡುವ ಮೂಲಕ ತಾವೊಬ್ಬ ನಿಜವಾದ ರೈತನ ಮಗ ಎಂಬುದನ್ನು ಸಿಎಂ ಸಾಬೀತುಪಡಿಸಿದ್ದಾರೆ ಎಂದು ಬಣ್ಣಿಸಿದರು.
ಮಂಡ್ಯ ಕೃಷಿ ವಿವಿ ಮೂಲ ಸೌಕರ್ಯಕ್ಕೆ 25 ಕೋಟಿ ರು. ನೀಡುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೃಷಿ ವಿವಿ ಕಾರ್‍ಯಾರಂಭ ಮಾಡಲು ಹಸಿರು ನಿಶಾನೆ ತೋರಿದ್ದಾರೆ. ಈ ವಿಚಾರದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕೊಂಕು ನುಡಿದಿರುವುದನ್ನು ಖಂಡಿಸಿದರು.ತಮ್ಮ ಸಹೋದರ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ ಎಂಬುದನ್ನು ಮರೆತು ಕೃಷಿ ವಿವಿ ಬಗ್ಗೆ ತಗಾದೆ ತೆಗೆದಿರುವ ಬಗ್ಗೆ ಅವರಿಗೆ ಮತದಾನಕ್ಕೆ ಮಾತ್ರ ಜಿಲ್ಲೆಯ ಮತದಾರು ಬೇಕೇ ಹೊರತು ಅಭಿವೃದ್ಧಿಗಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ದಲಿತರಿಗೆ ಅನ್ಯಾಯ ಮಾಡಿದ್ದಕ್ಕಾಗಿ ಕುಂಟುತ್ತಾ ವೀಲ್‌ಛೇರ್‌ನಲ್ಲಿ ತಿರುಗುವಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯರ ಬಗ್ಗೆ ವೈಯಕ್ತಿಕವಾಗಿ ಅವಹೇಳನ ಮಾಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಖಂಡಿಸಿದರು.ಸಂವಿಧಾನಿಕ ಹುದ್ದೆ ಜವಾಬ್ದಾರಿ ಅರಿಯದೆ ವಿಪಕ್ಷ ಮುಖಂಡರು ವೈಯಕ್ತಿಕ ಟೀಕೆ ಮೂಲಕ ಬಿಜೆಪಿ ಹೈಕಮಾಂಡ್‌ನ್ನು ಸಂತೃಪ್ತಿ ಪಡಿಸಲು ಮುಂದಾಗಿದ್ದಾರೆ. ಅವರಿಗೆ ವಿಪಕ್ಷ ನಾಯಕನಾಗಲು ಯಾವುದೇ ಯೋಗ್ಯತೆ, ಅರ್ಹತೆ ಇಲ್ಲ. ಕಾಂಗ್ರೆಸ್ ಮುಖಂಡರನ್ನು ಅವಹೇಳನಕಾರಿಯಾಗಿ ಟೀಕಿಸಿ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸಿಎಂ ಅಧಿಕಾರಕ್ಕೆ ಬಂದಾಗ ಅಂಬೇಡ್ಕರ್ ಅಭಿವೃದ್ಧಿ ನಿಗದ ಸುಮಾರು 400 ಕೋಟಿ ದಲಿತರ ಸಾಲ ಮನ್ನಾ ಮಾಡಿದ್ದರು. ಗುತ್ತಿಗೆಯಲ್ಲಿ ಒಂದು ಕೋಟಿವರೆಗೆ ಕೆಲಸ ಮಾಡಲು ಮೀಸಲಾತಿ ನೀಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಜಾತಿ, ಧರ್ಮ, ಜನಾಂಗದವರನ್ನು ಫಲಾನುಭವಿಗಳಾಗಿದ್ದಾರೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಜಾರಿಗೊಳಿಸಿರುವುದನ್ನು ನಾರಾಣಯಸ್ವಾಮಿ ಮರೆತಂದಿದೆ ಎಂದು ದೂರಿದರು.ಬೆಂಗಳೂರಿಗೆ 6 ನೇ ಹಂತದ ಕುಡಿಯುವ ನೀರಿನ ಯೋಜನೆ ಮಾಡುವ ಮೂಲಕ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಈ ಬಗ್ಗೆ ನಮ್ಮ ಸಚಿವರು, ಶಾಸಕರೊಟ್ಟಿಗೆ ಚರ್ಚಿಸಲಾಗುವುದು. ಬೆಂಗಳೂರಿನ ಜನರಿಗೆ ನೀರು ಕೊಡಲು ಕಾವೇರಿ ಅಲ್ಲದೇ, ಬೇರೆಬೇರೆ ಯೋಜನೆಗಳನ್ನೂ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆಯಿಂದ ಹೆಚ್ಚು ಅನುಕೂಲವಾಗುತ್ತದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದರು.
ಕೊನೇ ಭಾಗದ ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನಾಲಾ ಜಾಲದ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಪ್ಪಾಜಿಗೌಡ, ವಿಜಯಲಕ್ಷ್ಮಿ ರಘುನಂದನ್, ಸಾತನೂರು ಕೃಷ್ಣ, ಸಿ.ಎಂ. ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಚಂದ್ರಶೇಖರ್, ಬೋರೇಗೌಡ, ವಿಜಯಕುಮಾರ್ ಇದ್ದರು.