ಕನ್ನಡಪ್ರಭ ವಾರ್ತೆ ಮಂಡ್ಯ
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಪದ್ಧತಿಯಿಂದ ಕ್ಯಾನ್ಸರ್ ರೋಗಗಳು ಹೆಚ್ಚಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಹೇಳಿದರು.ನಗರದಲ್ಲಿರುವ ಗಾಂಧಿಭವನದಲ್ಲಿ ಶ್ರೀ ಎಜುಕೇಷನ್ ಟ್ರಸ್ಟ್‌ನ ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸೆಂಟರ್ ವತಿಯಿಂದ ಕೌಸಲ್ಯ ಅಲಯನ್ಸ್ ಸಂಸ್ಥೆ ಸಹಕಾರದೊಂದಿಗೆ ಆಯೋಜಿಸಿದ್ದ ಪ್ರಶಸ್ತಿ ಪತ್ರ ವಿತರಣೆ ಹಾಗೂ ಕ್ಯಾನ್ಸರ್ ಜಾಗೃತಿ ಅಭಿಯಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಕೂದಲು ಮತ್ತು ಉಗುರುಗಳಿಗೆ ಕ್ಯಾನ್ಸರ್ ಬರದು, ಉಳಿದ ಜೀವಕೋಶಗಳಿಗೆ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು, ಕ್ಯಾನ್ಸರ್ ಸಹಜವಾಗಿ ತಕ್ಷಣವೇ ಕಾಣಿಸಿಕೊಳ್ಳುವುದಿಲ್ಲ, ವೈದ್ಯರ ಮೂಲಕ ಪತ್ತೆ ಮಾಡಿಕೊಳ್ಳಬೇಕು ಎಂದು ನುಡಿದರು.ಪ್ರಸ್ತುತ ಕಾಲಮಾನದಲ್ಲಿ ಮಹಿಳೆಯರನ್ನು ಕ್ಯಾನ್ಸರ್ ಹೆಚ್ಚು ಬಾಂಧಿಸುತ್ತಿದೆ. ಸ್ತನ, ಗರ್ಭಾಶಯ, ಗರ್ಭಕಂಠ ಕ್ಯಾನ್ಸರ್‌ಗಳು ಮೊದಲ ಹಂತದಲ್ಲಿಯೇ ಪತ್ತೆಯಾದರೆ ಔಷಧದಿಂದ ಗುಣಪಡಿಸಬಹುದು ಎಂದು ಎಚ್ಚರಿಸಿದರು.
ವಿಜ್ಞಾನ- ತಂತ್ರಜ್ಞಾನ ಬೆಳೆದಂತೆ ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದಾದ ಔಷಧಗಳನ್ನು ಪತ್ತೆ ಮಾಡಿದ್ದಾರೆ, ಇನ್ನು ೧೦ ವರ್ಷಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಔಷಧಗಳು ಲಭ್ಯವಾಗುತ್ತವೆ ಎಂದು ನುಡಿದರು.ಗರ್ಭಿಣಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಎಂ ಶ್ವೇತಾ, ಪ್ರಸ್ತುತ ದಿನಗಳಲ್ಲಿ ಸ್ತನ, ಗರ್ಭಾಶಯ, ಗರ್ಭಕಂಠ ಕ್ಯಾನ್ಸರ್‌ಗಳು ಹೆಚ್ಚಾಗುತ್ತಿವೆ, ಅದೂ ಚಿಕ್ಕವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿವೆ, ಆರೋಗ್ಯಕರ ಜೀವನಶೈಲಿ ಇಲ್ಲದಾಗಿ. ಅಸುರಕ್ಷಿತ- ಅಸಂಬದ್ಧ ಲೈಂಗಿಕ ದೋಷಗಳಿಂದ ಗರ್ಭಕಂಠ, ಗರ್ಭಾಶಯ ರೋಗಗಳು ಹೆಚ್ಚಿ, ಕ್ಯಾನ್ಸರ್‌ಗೆ ತಿರುಗುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಟಿ.ಎನ್ ರಕ್ಷಿತ್‌ರಾಜ್, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ. ವಿ.ಡಿ ಸುವರ್ಣ, ಶಿಕ್ಷಣ ಇಲಾಖೆಯ ದಕ್ಷಿಣ ವಲಯ ಸಂಯೋಜನ ಅಧಿಕಾರಿ ರಾಧಾ, ಅಲಯನ್ಸ್ ಸಂಸ್ಥೆಯ ೧ನೇ ಉಪ ರಾಜ್ಯಪಾಲ ಎಚ್.ಎಂ.ಮಾದೇಗೌಡ, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.