ತೀರ್ಥಹಳ್ಳಿ: ಮಾರಕ ಕ್ಯಾನ್ಸರ್ ಕಾಯಿಲೆ ಉಲ್ಬಣ ಮುನ್ನವೇ ತಪಾಸಣೆ ನಡೆಸಿ, ಚಿಕಿತ್ಸೆ ಪಡೆದು ಪರಿಹಾರ ಕಂಡುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಈ ಕಾಯಿಲೆ ಹೆಚ್ಚೆಚ್ಚು ವ್ಯಾಪಿಸುತ್ತಿರುವುದು ಆತಂಕಕಾರಿ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ಸಂಸ್ಕೃತಿ ಮಂದಿರ ಆವರಣದಲ್ಲಿ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಸಹಯೋಗದೊಂದಿಗೆ ಸ್ಥಳೀಯ ಮಲೆನಾಡು ಮಹಿಳಾ ವೇದಿಕೆ ಹಮ್ಮಿಕೊಳ್ಳಲಾಗಿದ್ದ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಬಡ ಮತ್ತು ಕೆಳ ಮಧ್ಯಮವರ್ಗದ ಮಹಿಳೆಯರು ಶಿವಮೊಗ್ಗ, ಬೆಂಗಳೂರು ಮುಂತಾದ ದೂರದ ಊರುಗಳಿಗೆ ಹೋಗಿ ಈ ಕಾಯಿಲೆಗೆ ತಪಾಸಣೆ ಮಾಡಿಸಿಕೊಳ್ಳಲು ಅಸಮರ್ಥರಾದವರಿಗೆ ಈ ಶಿಬಿರ ಸಹಕಾರಿಯಾಗಿದೆ. ಅಗತ್ಯ ಉಳ್ಳವರು ಶಿಬಿರದ ಪ್ರಯೋಜನ ಪಡೆಯಬೇಕು ಎಂದರು. ಶಿಬಿರ ಉದ್ಘಾಟಿಸಿದ ಶಾಸಕ ಆರಗ ಜ್ಞಾನೇಂದ್ರ, ಆರೋಗ್ಯ ಸಮಸ್ಯೆ ತಪಾಸಣೆ ಬಗ್ಗೆ ಅಸಡ್ಡೆ ಸಲ್ಲದು. ಮಹಿಳೆಯರ ಸಂಕಷ್ಟವನ್ನು ಅರಿತು ಅವರ ಆರೋಗ್ಯದ ಕುರಿತಂತೆ ಮಲೆನಾಡು ಮಹಿಳಾ ವೇದಿಕೆಯವರು ಸಹ್ಯಾದ್ರಿ ನಾರಾಯಣ ಆಸ್ಪತ್ರೆ ತಜ್ಞವೈದ್ಯರ ಮೂಲಕ ತಪಾಸಣಾ ಶಿಬಿರ ಆಯೋಜಿಸಿರುವುದು ಪ್ರಶಂಸನೀಯ. ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲೂ ಈ ಬಗೆಯ ಶಿಬಿರ ಆಯೋಜಿಸುವ ಅಗತ್ಯವಿದೆ ಎಂದೂ ಹೇಳಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಮಾಜಿ ಸದಸ್ಯೆ ನಯನಾ ಶೆಟ್ಟಿ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ. ಕೀರ್ತನಾ, ಜ್ಯೋತಿ ದಿಲೀಪ್, ವಿಜಯಾ ಪದ್ಮನಾಭ್ ಇದ್ದರು. - - - -11ಟಿಟಿಎಚ್ 02: ಶಾಸಕ ಆರಗ ಜ್ಞಾನೇಂದ್ರ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಪಪಂ ಅಧ್ಯಕ್ಷೆ ಗೀತಾ ರಮೇಶ್ ಇದ್ದರು.