ಅಜೀಜಅಹ್ಮದ ಬಳಗಾನೂರ
ಕೆಲ ಮೊಟ್ಟೆಗಳಲ್ಲಿ ಕ್ಯಾನ್ಸರ್ ಹಾನಿಕಾರಕ ಅಂಶ ಪತ್ತೆಯಾಗಿದೆ ಎಂಬ ವದಂತಿಯಿಂದಾಗಿ ಮೊಟ್ಟೆ ಪ್ರಿಯರಲ್ಲಿ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಒಂದೇ ದಿನದಲ್ಲಿ ಶೇ. 25ರಷ್ಟು ಮೊಟ್ಟೆ ಮಾರಾಟ ಇಳಿಕೆ ಕಂಡಿದೆ.
ಎಗ್ಗೂಸ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಹಾನಿಕಾರಕ ಅಂಶಗಳಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ದೇಶವ್ಯಾಪಿ ಮೊಟ್ಟೆಗಳನ್ನು ಕ್ಯಾನ್ಸರ್ ಕುರಿತು ತಪಾಸಣೆ ನಡೆಸಲು ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲೂ ಹಲವು ಮೊಟ್ಟೆಗಳ ಸಗಟು ಮಾರಾಟ ಕೇಂದ್ರಗಳಿಂದ ಆಹಾರ ಇಲಾಖೆ ಅಧಿಕಾರಿಗಳು ಮೊಟ್ಟೆಗಳ ಪರೀಕ್ಷೆಗೆ ಮುಂದಾಗಿದ್ದಾರೆ. ಎಲ್ಲೆಡೆಯೂ ಮೊಟ್ಟೆಗಳಲ್ಲಿ ಕ್ಯಾನ್ಸರ್ ಹಾನಿಕಾರಕ ಅಂಶ ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಹಲವು ಗ್ರಾಹಕರು ಮೊಟ್ಟೆ ಖರೀದಿಸುವುದನ್ನೇ ನಿಲ್ಲಿಸಿದ್ದಾರೆ.ನಿತ್ಯ 10 ಲಕ್ಷ ಮೊಟ್ಟೆ ಮಾರಾಟ:
ಹು-ಧಾ ಮಹಾನಗರದಲ್ಲಿ 800ಕ್ಕೂ ಅಧಿಕ ಚಿಕನ್ ಅಂಗಡಿ, ಸಾವಿರಕ್ಕೂ ಅಧಿಕ ಕಿರಾಣಿ, ಡಬ್ಬಾ ಅಂಗಡಿಗಳಲ್ಲಿ ನಿತ್ಯ ಮೊಟ್ಟೆ ಮಾರಾಟ ಮಾಡಲಾಗುತ್ತಿದೆ. ಈ ಅಂಗಡಿಗಳಿಗೆ ಕೊಪ್ಪಳ, ಹೊಸಪೇಟೆ, ಗಂಗಾವತಿ, ಕುಮಟಾ, ಹೊನ್ನಾವರ ಸೇರಿದಂತೆ ಹಲವು ಭಾಗಗಳ ಸಗಟು ವ್ಯಾಪಾರಸ್ಥರಿಂದ ನಿತ್ಯ 10 ಲಕ್ಷಕ್ಕೂ ಅಧಿಕ ಮೊಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಬುಧವಾರ 7.5 ಲಕ್ಷ ಮೊಟ್ಟೆಗಳು ಮಾತ್ರ ಮಾರಾಟವಾಗಿದ್ದು, ಇನ್ನುಳಿದ ಮೊಟ್ಟೆ ಮರಳಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಹೊಸಪೇಟೆ ಸಗಟು ವ್ಯಾಪಾರಸ್ಥ ನಂದೀಶ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಹೊಟೇಲ್‌ಗಳಲ್ಲೂ ಕೇಳುವವರಿಲ್ಲ:
ಮಾಂಸಹಾರಿ ಹೊಟೇಲ್, ದಾಬಾಗಳಲ್ಲಿ ಮೊಟ್ಟೆಗಳಿಂದ ತರಹೇವಾರಿ ಖಾದ್ಯ ತಯಾರಿಸಲಾಗುತ್ತದೆ. ಆದರೆ, ಕಾನ್ಸರ್ ಕಾರಕ ಅಂಶ ಮೊಟ್ಟೆಗಳಲ್ಲಿ ಇದೆ ಎಂಬ ಸುದ್ದಿಯಿಂದ ಮಂಗಳವಾರದಿಂದ ಗ್ರಾಹಕರು ಮೊಟ್ಟೆಯಿಂದ ತಯಾರಿಸಿದ ಖಾದ್ಯ ತಿನ್ನುತ್ತಿಲ್ಲ. ಹೀಗಾಗಿ ಮೊಟ್ಟೆ ಖರೀದಿ ಕಡಿಮೆ ಮಾಡಿದ್ದೇವೆ ಎಂದು ಹೊಟೇಲ್ ಮಾಲಿಕ ಮಹ್ಮದಜಾವೇದ ಮಾಹಿತಿ ನೀಡಿದರು.ಬೇಕರಿಗಳಿಗೂ ಬಿಸಿ:
ಬೇಕರಿಯಲ್ಲಿ ಮೊಟ್ಟೆ ಬಳಸುವುದು ಸಾಮಾನ್ಯ. ಆದರೆ, ಈ ಪ್ರಕರಣದಿಂದ ಗ್ರಾಹಕರು ಮೊಟ್ಟೆ ರಹಿತ ಖಾದ್ಯ ಖರೀದಿಸುತ್ತಿದ್ದಾರೆ. ನಿತ್ಯವೂ 200ಕ್ಕೂ ಅಧಿಕ ಎಗ್‌ಪಪ್ಸ್ ಮಾರಾಟ ಮಾಡುತ್ತಿದ್ದೆವು. ಆದರೆ, ಮಂಗಳವಾರ, ಬುಧವಾರ ಎರಡೂ ದಿನ ಸೇರಿದರೆ 120 ಎಗ್‌ಪಪ್ಸ್ ಮಾರಾಟವಾಗಿವೆ ಎಂದು ಶ್ರೀನಂದಿ ಬೇಕರಿ ಮಾಲಿಕ ಮಾಲತೇಶ ತಿಳಿಸಿದರು.ದರ ಏರಿಕೆ ಕಡಿತಕ್ಕೆ ಗಿಮಿಕ್:
ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಚಳಿ ಹೆಚ್ಚಿರುವ ಕಾರಣ ಮೊಟ್ಟೆಗಳ ಮಾರಾಟವೂ ಅಧಿಕವಾಗುತ್ತದೆ. ಹೀಗಾಗಿ ದರದಲ್ಲೂ ಏರಿಕೆಯಾಗುತ್ತದೆ. ಕಳೆದ ಹತ್ತು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮೊಟ್ಟೆ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ 100 ಮೊಟ್ಟೆಗೆ ₹450ರಿಂದ ₹ 600 ಇದ್ದರೆ, ಕಳೆದ ವರ್ಷ ₹550ರಿಂದ ₹610 ಇತ್ತು. ಈ ಬಾರಿ ₹ 650ರಿಂದ ₹ 720ರ ವರೆಗೂ ಮಾರಾಟವಾಗುವ ಮೂಲಕ ಗರಿಷ್ಠ ಬೆಲೆಯ ದಾಖಲಾಗಿದೆ. ಹೀಗಾಗಿ ದರ ಏರಿಕೆ ಕಡಿತಕ್ಕೆ ಮೊಟ್ಟೆಯಲ್ಲಿ ಕಾನ್ಸರ್ ಕಾರಕ ಅಂಶವಿದೆ ಎಂದು ಹೇಳುತ್ತಿದ್ದಾರೆಂದು ಕೋಳಿ ಫಾರ್ಮ್ ಮಾಲೀಕರು ಹೇಳುತ್ತಿದ್ದಾರೆ. ಕೆಲ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವ ಕುರಿತು ಸರ್ಕಾರವೇ ಸಂಶಯ ವ್ಯಕ್ತಪಡಿಸಿದೆ. ಇದರಿಂದಾಗಿ ಮನೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ನಿಲ್ಲಿಸಿದ್ದೇವೆ. ಇನ್ನು ಶಾಲೆಯಲ್ಲಿ ನೀಡುವ ಮೊಟ್ಟೆ ತಿನ್ನದಂತೆ ತಿಳಿಸಿದ್ದೇವೆ.ರೇಖಾ ಮಂಗಳೂರ, ಶ್ರುತಿ ನಿಡಗುಂದಿ, ಗ್ರಾಹಕರುಮೊಟ್ಟೆಯಲ್ಲಿ ಕ್ಯಾನ್ಸರ್ ಹಾನಿಕಾರಕ ಅಂಶ ಪತ್ತೆಯಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಮೊಟ್ಟೆ ಮಾರಾಟದಲ್ಲಿ ಇಳಿಕೆಯಾಗಿದೆ. ಸರ್ಕಾರ, ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಿ ಜನರಲ್ಲಿರುವ ಗೊಂದಲ ನಿವಾರಿಸಬೇಕು.
ಬಾಬಾಜಾನ ನದಾಫ, ಚಿಕನ್ ಅಂಗಡಿ ಮಾಲಿಕ