ನಮ್ಮ ಸರ್ಕಾರ ನುಡಿದಂತೆ ನಡೆದಿದೆ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : May 17, 2024, 12:34 AM IST
ಚಿತ್ರ 16ಬಿಡಿಆರ್‌5ಬೀದರ್‌ನಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. | Kannada Prabha

ಸಾರಾಂಶ

ಪದವೀಧರರ, ಶಿಕ್ಷಕರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದಿಸಿದೆ. ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಯೋಜನೆಯಡಿಯಲ್ಲಿ ಮಾಸಿಕ ಭತ್ಯೆ ನೀಡುತ್ತಿದೆ. ಹೀಗಾಗಿ ಎರಡನೇ ಬಾರಿಗೆ ಈಶಾನ್ಯ ಪದವೀಧರರ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್‌ಗೆ ಗೆಲ್ಲಿಸಿರಿ ಎಂದು ಸಚಿವರು ಮನವಿ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಬೀದರ್

ಬಿಜೆಪಿಗರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಸುಳ್ಳು ಹೇಳುವುದೇ ಅವರ ಕಾಯಕ ಮಾಡಿಕೊಂಡಿದ್ದಾರೆ ಯುವಕರ ಭವಿಷ್ಯ ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಲೋಕಸಭಾ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಿಡಿ ಕಾರಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಡೆ ಕಾಂಗ್ರೆಸ್‌ ಅಲೆ ಇದೆ. ಹೀಗಾಗಿ ಪದವೀಧರರು ನಮ್ಮ ಪಕ್ಷದ ಅಭ್ಯರ್ಥಿಗೆ 1ನೇ ಪ್ರಾಶ್ಯಸ್ತದ ಮತ ನೀಡಬೇಕೆಂದು ಮನವಿ ಮಾಡಿದರು.

ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ನಮ್ಮ ಕಾಂಗ್ರೆಸ್‌ ಸರ್ಕಾರ ಸ್ಪಂದಿಸಿದೆ. ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಯೋಜನೆಯಡಿಯಲ್ಲಿ ಮಾಸಿಕ ಭತ್ಯೆ ನೀಡುತ್ತಿದೆ. ಹೀಗಾಗಿ ಎರಡನೇ ಬಾರಿಗೆ ಈಶಾನ್ಯ ಪದವೀಧರರ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್‌ಗೆ ಗೆಲ್ಲಿಸಿರಿ ಎಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ಕಳೆದ 11 ತಿಂಗಳಿನಿಂದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಹೀಗಾಗಿ ಕೇಂದ್ರದಲ್ಲಿ ಕೂಡ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವುದು ಶತಸಿದ್ಧ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಜೂನ್‌ 3ರಂದು ನಡೆಯಲಿರುವ ಈಶಾನ್ಯ ಪದವೀಧರರ ಕ್ಷೇತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಚಂದ್ರಶೇಖರ ಪಾಟೀಲ್‌ ಅವರು ಕಳೆದ 6 ವರ್ಷಗಳ ವರೆಗೆ ಪದವೀಧರರ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ಮನವಿಸಿದರು.

ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ 1.8 ಲಕ್ಷ ಮತದಾರರಿದ್ದು, ಬೀದರ್‌ ಜಿಲ್ಲೆಯಲ್ಲಿ 26,769 ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದ ಅವರು ಕಳೆದ 45 ವರ್ಷಗಳ ಇತಿಹಾಸದಲ್ಲಿಯೇ ನಿರುದ್ಯೋಗ ದರ ಜಾಸ್ತಿಯಾಗಿದೆ. ರಾಜ್ಯದಲ್ಲಿ 5 ಗ್ಯಾರಂಟಿಗಳು ವಿಶೇಷವಾಗಿ ನೀಡಿದ್ದೇವೆ 2 ವರ್ಷಗಳ ವರೆಗೆ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರು. ಭತ್ಯ ನೀಡುವ ಮೂಲಕ ಅವರಿಗೆ ಅನುಕೂಲ ಮಾಡಿದ್ದೇವೆ ಎಂದರು.

ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯದೊಂದಿಗೆ ಯುವಕರಿಗೆ ಖಾತ್ರಿ ಕೊಟ್ಟು ಅಂಪ್ರೆಟಿಶಿಪ್‌ ತರಬೇತಿ ಅವಧಿಯಲ್ಲಿ ವರ್ಷಕ್ಕೆ 1ಲಕ್ಷ ರು ನೀಡುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಈಗಾಗಲೇ ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಅಡಿಯಲ್ಲಿ 31 ಸಾವಿರ ಹುದ್ದೆಗಳನ್ನು ತುಂಬಿದ್ದೇವೆ. 4 ವರ್ಷದ ಬಿಜೆಪಿ ಸರ್ಕಾರ ಒಂದು ಹುದ್ದೆಯನ್ನು ಕೂಡ ಭರ್ತಿ ಮಾಡಿಲ್ಲ ಎಂದ ಅವರು ನಾವು ಅಧಿಕಾರಕ್ಕೆ ಬಂದ ನಂತರ 590 ಅರಣ್ಯ ವೀಕ್ಷಕರ, 310 ವಾಚರ್‌ ಹೀಗೆ ಒಟ್ಟು 850 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ನಾವು ಅಧಿಕಾರಕ್ಕೆ ಬಂದರೆ ಯುವಕರ ಭವಿಷ್ಯ ಉಜ್ವಲ ಆಗಬೇಕು ಎಂಬ ಉದ್ದೇಶದಿಂದ ಶೈಕ್ಷಣಿಕ ಸಾಲ ಮನ್ನಾ ಮಾಡುತ್ತೇವೆ ಎಂದು ಕೂಡ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಸಂಕೀರ್ಣ ಕಟ್ಟಡ 18 ತಿಂಗಳಲ್ಲಿ ಪೂರ್ಣ: ಬೀದರ್‌ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಸಂಕೀರ್ಣ ಕಟ್ಟಡಕ್ಕೆ 90ರಿಂದ 100 ಕೋಟಿ ರು. ಅಂದಾಜು ಪಟ್ಟಿ ತಯಾರಿಸಿ ನೀತಿ ಸಂಹಿತೆ ಮುಗಿದ ಕೂಡಲೆ 1ನೇ ಅಥವಾ 2ನೇ ಸಂಪುಟ ಸಭೆಯಲ್ಲಿ ಮಂಜೂರಾತಿ ಪಡೆಯಲಾಗುವುದು. 18 ತಿಂಗಳಿನಲ್ಲಿಯೇ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಏಕನಾಥ ಕರ್ನಾಟಕದಲ್ಲಿ ಕಾಲಿಡಲಿ ನೋಡೋಣ: ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಸರ್ಕಾರ ಇರೋದಿಲ್ಲ ಎಂಬ ಹೇಳಿಕೆಗೆ ಸಚಿವ ಖಂಡ್ರೆ ತಿರುಗೇಟು ನೀಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಹುದ್ದೆಯೇ ಛಿದ್ರ ಛಿದ್ರ ಇದೆ. ಅವರು ಅದನ್ನೇ ಉಳಿಸಿಕೊಳ್ಳೋದಿಲ್ಲ. ಅವರು ಕರ್ನಾಟಕದಲ್ಲಿ ಕಾಲಿಡಲಿ ನೋಡೋಣ ಎಂದು ಸಚಿವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ರಹೀಮ್‌ ಖಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಮಾಜಿ ಸಚಿವ ರಾಜಶೇಖರ ಪಾಟೀಲ್‌, ಎಂಎಲ್ಸಿಗಳಾದ ಭೀಮರಾವ್‌ ಪಾಟೀಲ್‌, ಅರವಿಂದಕುಮಾರ ಅರಳಿ, ಮಾಜಿ ಶಾಸಕ ಅಶೋಕ ಖೇಣಿ, ಮಾಲಾ ಬಿ., ಶರಣಪ್ಪ ಮಟ್ಟೂರ, ಧನರಾಜ ತಾಳಂಪಳ್ಳಿ, ಅಭಿಷೇಕ ಪಾಟೀಲ್‌ ಹಾಗೂ ಅಮೃತರಾವ್‌ ಚಿಮಕೋಡೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ