ಪಾರಂಪರಿಕವಾಗಿ ಕೃಷಿ ಶ್ರೀಮಂತವಾಗಿದೆ. ಆಧುನಿಕತೆ ಸಮ್ಮಿಲನದೊಂದಿಗೆ ಮಣ್ಣು ಹಾಗೂ ನೀರನ್ನು ಆರೋಗ್ಯಕರವಾಗಿ ಬಳಕೆ ಮಾಡಿಕೊಂಡರೆ ಯಶಸ್ಸು ಸಾಧ್ಯ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಪಾರಂಪರಿಕವಾಗಿ ಕೃಷಿ ಶ್ರೀಮಂತವಾಗಿದೆ. ಆಧುನಿಕತೆ ಸಮ್ಮಿಲನದೊಂದಿಗೆ ಮಣ್ಣು ಹಾಗೂ ನೀರನ್ನು ಆರೋಗ್ಯಕರವಾಗಿ ಬಳಕೆ ಮಾಡಿಕೊಂಡರೆ ಯಶಸ್ಸು ಸಾಧ್ಯ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.ಮುಧೋಳ ಹೊಲವಲಯದ ಕರ್ನಾಟಕ ಸಭಾಭವನದಲ್ಲಿ ನಿರಾಣಿ ಶುಗರ್ಸ್ ವತಿಯಿಂದ ಕಬ್ಬಿನ ಅಧಿಕ ಇಳುವರಿಯ ಕುರಿತು ಭಾನುವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಕೃಷಿಯಲ್ಲಿ ವೃತ್ತಿಪರತೆ ಮತ್ತು ತಂತ್ರಜ್ಞಾನ ಅಳವಡಿಕೆಯ ಜತೆಗೆ ಭೂಮಿಯ ಸತ್ವ ಅರಿತು, ಕಡಿಮೆ ರಸಾಯನಿಕ ಬೆಳಸಿ ವ್ಯವಸಾಯ ಮಾಡಿ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ. ಹೊಸ ಕಬ್ಬಿನ ತಳಿಗಳ ಸೃಜನೆ, ಕಬ್ಬು ಸಂಶೋಧನೆ ಮತ್ತು ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಮೂಡುವಂತೆ ಪ್ರೇರೆಪಿಸುವ ಮಹತ್ವಾಕಾಂಕ್ಷೆಯಿಂದ ಮರೆಗುದ್ದಿ ಹಾಗೂ ಬುದ್ನಿ ನಡುವೆ 100 ಎಕರೆ ಜಮೀನಿನಲ್ಲಿ ಪ್ರಾತ್ಯಕ್ಷತೆ, ಸಂಶೋಧನೆ ಹಾಗೂ ತರಬೇತಿ ಕೇಂದ್ರ ನಿರಾಣಿ ಸಮೂಹದಿಂದ ನಿರ್ಮಿಸಲಾಗವುದೆಂದು ಹೇಳಿದರು.
ಕುಡಚಿಯ ಪ್ರಗತಿಪರ ರೈತ ಅಣ್ಣಾಸಾಹೇಬ ಟೊಣ್ಣಿ ಮಾತನಾಡಿ, ನಾನು ಸ್ವತಃ ಪ್ರತಿ ಎಕರೆಗೆ 180 ಟನ್ ಬೆಳೆದಿದ್ದೇನೆ. ನಿಗದಿತ ಸಮಯದಲ್ಲಿ ನಿರ್ದಿಷ್ಟ ಅಳತೆಯಲ್ಲಿ ನಾಟಿ ಮಾಡಿ, ಮಿತಪ್ರಮಾಣದಲ್ಲಿ ನೀರು ಹಾಗೂ ಮಣ್ಣಿನ ಫಲವತ್ತತೆಗಾಗಿ ಸಾವಯವ ಬಳಕೆ ಮಾಡಿ ಶಿಸ್ತುಬದ್ಧವಾಗಿ ವ್ಯವಸಾಯ ಮಾಡಿದರೆ ಪ್ರತಿ ಎಕರೆಗೆ 180 ಟನ್ ಬೆಳೆಯಬಹುದೆಂದು ಹೇಳಿದ ಅವರು, ಕಬ್ಬಿನ ಬೀಜದ ಆಯ್ಕೆ, ಭೂಮಿ ಹದ ಮಾಡುವುದು, ಸರಿಯಾದ ಸಮಯದಲ್ಲಿ ಪೋಷಕಾಂಶಗಳ ಬೆಳಕೆಯೊಡನೆ, ಕೀಟನಾಶಕ ಸಿಂಪಡಣೆಯ ಕುರಿತು ಮಾರ್ಗದರ್ಶನ ಮಾಡಿದರು.ರೋಹಿಣಿ ಬಯೋಟೆಕ್ ಮುಖ್ಯಸ್ಥ ಮಲ್ಲಪ್ಪ ಕಟ್ಟಿ ಮಾತನಾಡಿ, ಅತಿಯಾದ ರಸಾಯನಿಕ ಬಳಕೆ, ಬಿಡುವಿಲ್ಲದೆ ಮಾಡುವ ಬೇಸಾಯ, ಪಾರಂಪರಿಕತೆ ಮರೆತು ಬೇಸಾಯ ಮಾಡುವುದು ಭೂಮಿ ಮತ್ತು ರೈತ ಇಬ್ಬರಿಗೂ ಹಾನಿಕರ. ಕೃಷಿಗೆ ಬೇಕಾದ ಗೊಬ್ಬರ ಸೇರಿದಂತೆ ಎಲ್ಲವೂ ರೈತನ ಮನೆಯಲ್ಲಿಯೇ ದೊರೆಯುತ್ತವೆ, ಸದ್ಬಳಕೆಯ ಆಸಕ್ತಿ ನಮ್ಮ ರೈತರದ್ದಾಗಬೇಕೆಂದು ಹೇಳಿದರು.
ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಪ್ರಾಸ್ತವಿಕವಾಗಿ ಮಾತನಾಡಿದರು, ಕೆ.ಎಲ್.ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮಂಜುನಾಥ ಚೌರಡ್ಡಿ, ವರಡಂಟ್ ಬಯೋ ಅಗ್ರಿ ಕಂಪನಿ ಮುಖ್ಯಸ್ಥ ಎನ್.ಆರ್ ಉಪನ್ಯಾಸ ನೀಡಿದರು, ಕಬ್ಬು ವಿಭಾಗದ ನಿರ್ದೇಶಕ ಎನ್.ವಿ.ಪಡಿಯಾರ್ ಸ್ವಾಗತಿಸಿದರು, ಗೋಪಾಲ ಗಂಗರಡ್ಡಿ ವಂದಿಸಿದರು.