ಕನ್ನಡಪ್ರಭ ವಾರ್ತೆ ಹುಕ್ಕೇರಿ
ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ತಂದೆ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಾರೆ. ಅವರ ಕುಟುಂಬಸ್ಥರು ಗುಡ್ಡ ತೆರವು ಮಾಡಿ ಜಾಗವನ್ನು ಕಬ್ಜಾ ತೆಗೆದುಕೊಂಡಿದ್ದಾರೆ. ಸಾವಿರಾರು ಎಕರೆ ಜಮೀನು ಕಬಳಿಸಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಗಂಭೀರ ಆರೋಪ ಮಾಡಿದರು.ಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಳ್ಳಭಟ್ಟಿ ಸಾರಾಯಿ ತಯಾರಿಸುವವರು ಇವರ ಜೊತೆಗಿದ್ದಾರೆ. ಕಮೀಷನ್ ಪಡೆಯಲು ಅವರ ಏಜೆಂಟರು ನಿರತರಾಗಿದ್ದಾರೆ ಎಂದು ದೂರಿದರು.
ಹಿಂದು ಸಂಸ್ಕೃತಿ, ಪರಂಪರೆಗೆ ಅವಮಾನ ಮಾಡುತ್ತಾರೆ. ಹಿಂದು ಮಹಾನ್ ನಾಯಕರನ್ನು ಅಪಮಾನಿಸುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.ವೋಟ್ ಹಾಕದಿದ್ದರೇ ಕರೆಂಟ್ ಕಟ್ ಮಾಡುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ. 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಬರ್ಬಾದ್ ಮಾಡಿದೆ. ರಾಹುಲ್ ಬಾಬಾ ಆ್ಯಂಡ್ ಕಂಪನಿ ಈ ದೇಶವನ್ನು ಸುರಕ್ಷಿತವಾಗಿ ಇಡುವುದಿಲ್ಲ. ಕೇವಲ ಮೋದಿ ಅವರಿಂದ ಮಾತ್ರ ದೇಶ ಸುರಕ್ಷಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಅಂಟಿದ್ದ ಭಯೋತ್ಪಾದನೆ ನಿರ್ಮೂಲನೆ ಮಾಡಿದರು ಎಂದರು.
ಉರಿ ಮತ್ತು ಫುಲ್ವಾಮಾದಲ್ಲಿ ಘಟನೆ ನಡೆದ ಭಾರತದಲ್ಲಿ ಮನಮೋಹನ ಸಿಂಗ್ ಅಧಿಕಾರದಲ್ಲಿ ಇರಲಿಲ್ಲ. ಬದಲಾಗಿ ಕೇಂದ್ರದಲ್ಲಿ ಮೋದಿ ಸರ್ಕಾರವಿತ್ತು. ಹೀಗಾಗಿ ಪಾಕಿಸ್ತಾನದ ಒಳಹೊಕ್ಕು ಸರ್ಜಿಕಲ್ ಸ್ಕ್ರೈಟ್ ಮಾಡಲಾಯಿತು. ಮೋದಿ ಸರ್ಕಾರದ ಆಡಳಿತದ 10 ವರ್ಷದಲ್ಲಿ ಆರ್ಥಿಕ ಸ್ಥಿತಿ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. 3ನೇ ಬಾರಿಗೆ ಮೋದಿ ಪ್ರಧಾನಿಯಾದರೇ ದೇಶದ ಆರ್ಥಿಕ ಸ್ಥಿತಿಯಲ್ಲೂ 3ನೇ ಸ್ಥಾನಕ್ಕೇರಲಿದೆ ಎಂದು ತಿಳಿಸಿದರು.ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ್ ಪ್ರಕರಣದಲ್ಲಿ ಎಸ್‌ಡಿಪಿಐ ಕೈವಾಡವಿದೆ ಎಂಬುವುದನ್ನು ರಾಷ್ಟ್ರೀಯ ತನಿಖಾ ದಳ ಬಹಿರಂಗಪಡಿಸಿತ್ತು. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್‌ಡಿಪಿಐ ಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಅಂತಹ ಎಸ್‌ಡಿಪಿಐ ಸಹಕಾರ ಪಡೆದು ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸುತ್ತಿದೆ ಎಂದು ದೂರಿದರು.
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾದಾಗ ಆರಂಭದಲ್ಲಿ ಕಾಂಗ್ರೆಸ್ ಪಕ್ಷದವರು ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ವಾದಿಸಿದ್ದರು. ನಂತರ ಎನ್ಐಎ ತನಿಖೆ ನಡೆಸಿ ಎಸ್‌ಡಿಪಿಐ ಸಂಚು ಇರುವುದನ್ನು ಹೊರಹಾಕಿತು. ನೀವು ಚಿಂತೆ ಮಾಡಬೇಡಿ, ಕಾಂಗ್ರೆಸ್ ಸರ್ಕಾರ ಏನೇ ಮಾಡಲಿ ನೀವು ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಮತ ನೀಡಿ ಗೆಲ್ಲಿಸಿ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು. ಮೋದಿಯವರು ಕರ್ನಾಟಕವನ್ನು ರಕ್ಷಣೆ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕಕ್ಕೆ ರಕ್ಷಣೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.ಸಿಎಂ ಉತ್ತರಿಸಲಿ:
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹10 ಸಾವಿರ ಹಣ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತನ್ನ ಪಾಲಿನ ₹4 ಸಾವಿರ ಹಣ ಸ್ಥಗಿತಗೊಳಿಸಿದೆ. ರೈತ ಪರ ಇದ್ದೇವೆ. ಈ ಸರ್ಕಾರ ಏಕೆ ರೈತರಿಗೆ ರಾಜ್ಯದ ವತಿಯಿಂದ ಕೊಡುತ್ತಿದ್ದ ₹4 ಸಾವಿರ ಹಣ ಸ್ಥಗಿತಗೊಳಿಸಿದೆ ಎಂಬುವುದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ರಾಹುಲ್ ಬಾಬಾ ಸೋಲು ಖಚಿತ:
ರಾಯಬರೇಲಿಯಿಂದ ಕಾಂಗ್ರೆಸ್‌ನ ರಾಹುಲ್ ಬಾಬಾ ಸ್ಪರ್ಧೆ ಮಾಡುತ್ತಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿಯ ದಿನೇಶ್ ಪ್ರತಾಪ್ ಎದುರು ಸೋಲುವುದು ಖಚಿತ. ರಾಹುಲ್ ಸೋಲುತ್ತಾರೆ. ಇದನ್ನು ಬರೆದಿಡಿ ಎಂದು ಅಮೀತ್ ಶಾ ಭವಿಷ್ಯ ನುಡಿದರು.ಕೋವಿಡ್ ಸಂದರ್ಭದಲ್ಲಿ ರಾಹುಲ್ ಬಾಬಾ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ. ಅದು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡಿದರು. ಆದರೆ, ರಾಹುಲ್ ಗಾಂಧಿ ತಮ್ಮ ಸಹೋದರಿಯೊಂದಿಗೆ ರಾತೋರಾತ್ರಿ ವ್ಯಾಕ್ಸಿನ್ ತೆಗೆದುಕೊಂಡರು. 10 ವರ್ಷಗಳಲ್ಲಿ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಬಂದಿಲ್ಲ ಎಂದು ತಿಳಿಸಿದರು.
ನೇಹಾ ಪ್ರಕರಣ: ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡ್ತೇವೆ:ಮತಾಂತರ ಆಗಲು ವಿರೋಧಿಸಿದ್ದಕ್ಕೆ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಗಿದೆ. ಆದರೆ, ಕಾಂಗ್ರೆಸ್‌ನವರು ಈ ಪ್ರಕರಣವನ್ನು ವೈಯಕ್ತಿಕ ಎಂದು ಹೇಳಿದ್ದರು. ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ವಿರೋಧಿಸಿದ್ದಕ್ಕೆ ನೇಹಾ ಹತ್ಯೆಯಾಗಿದ್ದು, ಅವಳಿಗೆ ನ್ಯಾಯ ಸಿಗಬೇಕಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಆಗ ಅನ್ಯಾಯ ಮಾಡಿದವರಿಗೆ ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಕೇಂದ್ರ ಸಚಿವ ಅಮೀತ್ ಶಾ ಗುಡುಗಿದರು.
ಹುಕ್ಕೇರಿಯಲ್ಲಿ ಬಿಜೆಪಿ ಸಂಕಲ್ಪ ಸಮಾವೇಶಕ್ಕೆ ವಿಳಂಬವಾಗಿ ಆಗಮಿಸಿದ್ದಕ್ಕೆ ಕೇಂದ್ರ ಸಚಿವ ಅಮಿತ್ ಶಾ ಕ್ಷಮೆಯಾಚಿಸಿದರು.ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ಶಾಸಕರಾದ ಶಶಿಕಲಾ ಜೊಲ್ಲೆ, ಧುರ್ಯೋಧನ ಐಹೊಳೆ, ನಿಖಿಲ ಕತ್ತಿ, ರಾಜೇಶ ನೇರ್ಲೆ ಮೊದಲಾದವರು ಉಪಸ್ಥಿತರಿದ್ದರು.3 ತಿಂಗಳಿಗೊಮ್ಮೆ ವಿದೇಶ ಪ್ರಯಾಣ ಮಾಡುವ ರಾಹುಲ್ ಬಾಬಾ ಬೇಕಾ? ಅಥವಾ ರಜೆ ಪಡೆಯದೇ ಕೆಲಸ ಮಾಡುವ ಮೋದಿ ಬೇಕಾ?. ಅಣ್ಣಾಸಾಹೇಬ ಜೊಲ್ಲೆ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ 3ನೇ ಬಾರಿಗೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು. ಚಂದ್ರಯಾನಕ್ಕೆ 20 ಸಲ ಸೋನಿಯಾ ಗಾಂಧಿ ಪ್ರಯತ್ನಿಸಿದರೂ ಯಶಸ್ವಿ ಆಗಲಿಲ್ಲ. ಆದರೆ, ಮೋದಿಯವರು ಒಂದೇ ಬಾರಿಯಲ್ಲಿ ಚಂದ್ರಯಾನ ಸಕ್ಸಸ್ ಮಾಡಿದರು.
-ಅಮಿತ್ ಶಾ, ಕೇಂದ್ರ ಸಚಿವ.