ವರುಣ ಕ್ಷೇತ್ರದ ವಿವಿಧೆಡೆ ಸುನಿಲ್‌ ಬೋಸ್‌, ಯತೀಂದ್ರ ರೋಡ್‌ ಶೋ

KannadaprabhaNewsNetwork |  
Published : Apr 08, 2024, 01:01 AM IST
64 | Kannada Prabha

ಸಾರಾಂಶ

ಕಪ್ಪುಹಣ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ರೈತವಿರೋಧಿ ಕಾಯ್ದೆ ಅನುಷ್ಠಾನಗೊಳಿಸಿ ರೈತರಿಗೆ ಮಾರಕವಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಸುನಿಲ್‌ ಬೋಸ್ ಮತ್ತು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಮತಯಾಚಿಸಿದರು.

ತಾಲೂಕಿನ ಕಾರ್ಯ ಗ್ರಾಮದ ಕಾರ್ಯಸಿದ್ದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯ, ದಾಸನೂರು, ಕೊಣನೂರು, ತಗಡೂರು, ಮಲ್ಲೂಪುರ, ನಗರ್ಲೆ, ಸುತ್ತೂರು, ಬಿಳಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ತೆರೆದ ಜೀಪಿನಲ್ಲಿ ಮತಯಾಚನೆ ನಡೆಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಸಾಥ್ ನೀಡಿದರು.

ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ, ಬಡವರ ಬದುಕು ಮೂರಾಬಟ್ಟೆಯಾಗಿದೆ. ಕಪ್ಪುಹಣ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ರೈತವಿರೋಧಿ ಕಾಯ್ದೆ ಅನುಷ್ಠಾನಗೊಳಿಸಿ ರೈತರಿಗೆ ಮಾರಕವಾಗಿದೆ. ಜೊತೆಗೆ ಕೋಮು ದ್ವೇಷ ಹೆಚ್ಚಾಗಿದೆ. ತಮ್ಮ ಸರ್ಕಾರದ ವಿರುದ್ದ ಧ್ವನಿ ಎತ್ತುವವರ ಮೇಲೆ ಐಟಿ, ಇಡಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಕೇಸ್ ದಾಖಲಿಸಿ ಪ್ರತಿಭಟನಾಕಾರರ ಧ್ವನಿಯನ್ನೂ ಕಸಿದುಕೊಳ್ಳುತ್ತಿದೆ. ಆ ಮೂಲಕ ಸರ್ವಾಧಿಕಾರ ಸ್ಥಾಪಿಸಿ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬಡಕುಟುಂಬದ ಮಹಿಳೆಯರಿಗೆ 1 ಲಕ್ಷ, ಅಲ್ಲದೆ ಉದ್ಯೋಗ ನೇಮಕಾತಿಯಲ್ಲಿ ಶೇ. 50ರಷ್ಟು ಮೀಸಲಾತಿ, ರೈತರಿಗಾಗಿ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಎಂ.ಎಸ್‌.ಪಿ ಕಾನೂನು, ರೈತರ ಸಾಲಮನ್ನಾ, ಕೃಷಿಯನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸುವುದು ಸೇರಿದಂತೆ 25 ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಬಡವರ ಬದುಕು ಹಸನಾಗಲು ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್‌ ಬೋಸ್‌ ಅವರನ್ನು 49 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದರು.

ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ, ನುಡಿದಂತೆ ನಡೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಶಕ್ತಿ ತುಂಬಲು ಮತ್ತು ದಿ.ಆರ್. ಧ್ರುವನಾರಾಯಣ್ ಅವರ ಆತ್ಮಕ್ಕೆ ಶಾಂತಿ ಸಿಗಲು ಕಾಂಗ್ರೆಸ್‌ಪಕ್ಷದ ಸಾಧನೆಯನ್ನು ಮನೆ ಮನೆಗೆ ತಿಳಿಸಿ ಹೆಚ್ಚಿನ ಮತಗಳನ್ನು ಕೊಡಿಸುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮತ ಬಹಿಷ್ಕಾರ ಮಾಡುತ್ತೇವೆ ಆಕ್ರೋಶ

ಮಲ್ಲೂಪುರ ಗ್ರಾಪಂನಲ್ಲಿ ರೋಡ್‌ ಶೋ ನಡೆಸುವ ವೇಳೆ ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಯ ಬಳಿ ರೈತಮಕ್ಕಳಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ನಿರತರ ಬಳಿ ತೆರಳಿದ ಯತೀಂದ್ರ ಮತ್ತು ಅಭ್ಯರ್ಥಿ ಸುನಿಲ್‌ ಬೋಸ್ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಯತೀಂದ್ರ ಸಿದ್ದರಾಮಯ್ಯ ಕಾರ್ಖಾನೆಯವರಿಗೆ ಉದ್ಯೋಗ ನೀಡುವಂತೆ ಸೂಚಿಸಿದ್ದರೂ ಅವರು ಒಪ್ಪಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳಿಗೆ ತಿಳಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮನವೊಲಿಸಲು ಮುಂದಾದರು. ಈ ವೇಳೆ ಪ್ರತಿಭಟನಾ ನಿರತರು ನೀವು ಈ ಮಾತನ್ನು ಸಾಕಷ್ಟು ಬಾರಿ ಹೇಳಿಕೆ ನೀಡಿದ್ದೀರಿ. ನೀವು ನಮ್ಮ ಸಮಸ್ಯೆಯನ್ನು ಸಿದ್ದರಾಮಯ್ಯರಿಗೆ ತಿಳಿಸಿಯೇ ಇಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮನ್ನು ಸಂತೈಸಲು ಬಂದಿದ್ದೀರಿ ಹೊರತು ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಆದ್ದರಿಂದ ನಮ್ಮ ಮಲ್ಲೂಪುರ ಗ್ರಾಮದಲ್ಲಿ 500ಮತಗಳಿದ್ದು 1 ಮತವನ್ನೂ ಚಲಾಯಿಸುವುದಿಲ್ಲ. ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕಾಂಗ್ರೆಸ್‌ ಮುಖಂಡರಿಗೆ ಇರುಸು ಮುರುಸು ಉಂಟಾದಂತಾಯಿತು.

ಈ ವೇಳೆ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯರಂಗಸ್ವಾಮಿ, ಜಿಪಂ ಮಾಜಿ ಸದಸ್ಯೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಸರ್ವೇಶ್, ದಕ್ಷಿಣಮೂರ್ತಿ, ಗೋಣಹಳ್ಳಿ ಕುಮಾರ್, ಚಿನ್ನಂಬಳ್ಳಿ ರಾಜು, ಕೆಂಪಣ್ಣ, ಆರ್. ಮಹದೇವು, ಮುದ್ದು ಮಾದೇಗೌಡ, ಗುರುಪಾದ ಸ್ವಾಮಿ, ಆಲಂಬೂರು ಮೋಹನ್‌ ಕುಮಾರ್, ಗಾರ್ಡನ್‌ ಮಹೇಶ್, ಸಿ.ಆರ್. ಮಹದೇವು, ಜಗದೀಶ್, ತಾಪಂ ಮಾಜಿ ಸದಸ್ಯ ಪದ್ಮನಾಭ ಮೊದಲಾದವರು ಇದ್ದರು.

PREV

Recommended Stories

ಸಮ್ಮತಿಯ ಲೈಂಗಿಕ ಕ್ರಿಯೆ ರೇ* ಅಲ್ಲ : ಕೋರ್ಟ್‌
ಕರ್ನಾಟಕದ ಸಗಣಿ ಎರಚೋ ಹಬ್ಬಕ್ಕೆ ಅಮೆರಿಕ ಯೂಟ್ಯೂಬರ್ ಅಪಹಾಸ್ಯ