ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಶೀಘ್ರ ಅಭ್ಯರ್ಥಿಗಳ ಘೋಷಣೆ: ವಿಜಯೇಂದ್ರ

KannadaprabhaNewsNetwork |  
Published : Jan 17, 2026, 04:00 AM IST
ಸುದ್ದಿಗೋಷ್ಠಿಯಲ್ಲಿ ಬಿವೈ ವಿಜಯೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆಗೆ ಸಂಬಂಧಿಸಿದಂತೆ ಶೀಘ್ರವೇ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆಗೆ ಸಂಬಂಧಿಸಿದಂತೆ ಶೀಘ್ರವೇ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಪಕ್ಷದಲ್ಲಿರುವ ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲೂ ಒತ್ತು ಕೊಡಲಾಗುತ್ತಿದೆ. ಶೀಘ್ರದಲ್ಲಿ ಅಭ್ಯರ್ಥಿಯ ಘೋಷಣೆಯೂ ಆಗಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಜನ ರೋಸಿ ಹೋಗಿದ್ದಾರೆ. ಈಗಿನ ಪರಿಸ್ಥಿತಿ ಗಮನಿಸಿದರೆ ಅನುಕಂಪ ಎಲ್ಲಿಯೂ ಕೆಲಸ ಮಾಡುವುದಿಲ್ಲ. ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಉತ್ಸುಕರಾಗಿದ್ದಾರೆ ಎಂದರು.

ಶನಿವಾರ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ರದ್ದಾಗಿಲ್ಲ. ಜ.19, 20ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇರುವುದರಿಂದ ಸದ್ಯಕ್ಕೆ ಆ ಬಗ್ಗೆ ಚರ್ಚೆ ಆಗಿಲ್ಲ. ಅದರ ಹೊರತಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಜಿ ರಾಮ್‌ ಜಿ ವಿಷಯದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ. 2047 ವಿಕಸಿತ ಭಾರತ ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ಅವರು ಯೋಜನೆ ರೂಪಿಸಿದ್ದಾರೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವ ಉದ್ದೇಶ ಇದರಲ್ಲಿದೆ. ನರೇಗಾ ಇದ್ದಾಗ ಭ್ರಷ್ಟಾಚಾರಕ್ಕೆ ಅವಕಾಶವಿತ್ತು. ಅದೆಲ್ಲದಕ್ಕೂ ಕಡಿವಾಣ ಹಾಕಿ ಯೋಜನೆ ರೂಪಿಸಿದ್ದಾರೆ. ಮೋದಿ ಅವರ ಬೆಳವಣಿಗೆ ಸಹಿಸದೆ ಕಾಂಗ್ರೆಸ್ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರ ನಡೆಸುತ್ತಿರುವ ವಿಶೇಷ ಅಧಿವೇಶನವೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾದಾಗಲೂ ಕಾಂಗ್ರೆಸ್ಸಿನವರು ವಿರೋಧಿಸಿದರು. ಎಲ್ಲ ಅಭಿವೃದ್ಧಿ ವಿಷಯಗಳಲ್ಲಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಒಪ್ಪದೆ ಪ್ರತ್ಯೇಕ ಶಿಕ್ಷಣ ನೀತಿ ತರುವುದಾಗಿ ಹೇಳಿ ಅದನ್ನೂ ತರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ