ವಾಯವ್ಯ ಸಾರಿಗೆ ಸಂಸ್ಥೆಯ ಹುದ್ದೆ ಭರ್ತಿಗೆ ಅಭ್ಯರ್ಥಿಗಳ ಪಟ್ಟು

KannadaprabhaNewsNetwork |  
Published : Jul 29, 2026, 02:00 AM IST
ಸಾರಿಗೆ ಸಂಸ್ಥೆಯಲ್ಲಿ 814 ಬಾಕಿ ಹುದ್ದೆಗಳ ನೇಮಕಾತಿ ವಿಳಂಬ ಖಂಡಿಸಿ ಹುಬ್ಬಳ್ಳಿ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ನೂರಾರು ಅಭ್ಯರ್ಥಿಗಳು ಪ್ರತಿಭಟನೆ ಆರಂಭಿಸಿದರು. | Kannada Prabha

ಸಾರಾಂಶ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಾಕಿ ಉಳಿದಿರುವ 814 ಚಾಲಕ-ನಿರ್ವಾಹಕ ಹುದ್ದೆ ತಕ್ಷಣವೇ ಭರ್ತಿ ಮಾಡಬೇಕೆಂದು ಆಗ್ರಹಿಸಿ ನೂರಾರು ಅಭ್ಯರ್ಥಿಗಳು ಇಲ್ಲಿನ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ಹುಬ್ಬಳ್ಳಿ:

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಾಕಿ ಉಳಿದಿರುವ 814 ಚಾಲಕ-ನಿರ್ವಾಹಕ ಹುದ್ದೆ ತಕ್ಷಣವೇ ಭರ್ತಿ ಮಾಡಬೇಕೆಂದು ಆಗ್ರಹಿಸಿ ನೂರಾರು ಅಭ್ಯರ್ಥಿಗಳು ಇಲ್ಲಿನ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಭರವಸೆ ಈಡೇರಿಸದಿದ್ದರೆ ಬುಧವಾರ ಸಂಜೆಯಿಂದ ಆಮರಣಾಂತ ಉಪವಾಸ ಆರಂಭಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಹಿಂದೆ ಹೋರಾಟ ನಡೆಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ರಾಮಲಿಂಗ ರೆಡ್ಡಿ ಅವರು (2025ರ ನ. 7ರಂದು) ನಡೆಸಿದ ಮಾತುಕತೆಯಲ್ಲಿ ಉಳಿದ ಹುದ್ದೆಗಳಷ್ಟೇ ಅಲ್ಲ, ಇನ್ನಷ್ಟು ಹೆಚ್ಚುವರಿ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಜತೆಗೆ ಸದನದಲ್ಲೂ 2,000ಕ್ಕೂ ಹೆಚ್ಚು ಹುದ್ದೆ ಭರ್ತಿ ಮಾಡುವುದಾಗಿ ಘೋಷಿಸಿದ್ದರು. ಆದರೆ, ಈ ಕುರಿತು ಕ್ರಮ ಕೈಗೊಂಡಿಲ್ಲ. ಅಭ್ಯರ್ಥಿಗಳು ಪ್ರತಿವಾರ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಳೆಯಲ್ಲಿಯೇ ಪ್ರತಿಭಟನೆ:ಮಂಗಳವಾರ ಬೆಳಗ್ಗೆ ಪ್ರತಿಭಟನೆ ಆರಂಭಿಸಿದ ವೇಳೆ 10 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿಯಿತು. ಆದರೂ ಪ್ರತಿಭಟನಾಕಾರರು ಮಳೆ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿರುವ ಸುಭಾಷಸಿಂಗ್ ಜಮಾದಾರ ಮಾತನಾಡಿ, 2019ರಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 2,814 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಮೊದಲ ಹಂತದಲ್ಲಿ 1000, ನವೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮತ್ತೆ 1000 ಹುದ್ದೆ ಭರ್ತಿ ಮಾಡಲಾಗಿದೆ. ಇದೀಗ ಉಳಿದ ಹುದ್ದೆಗಳ ಭರ್ತಿಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಈ ವೇಳೆ ಪಾಲಿಕೆ ಮಾಜಿ ಸದಸ್ಯ, ಕಲಾಲ ಸಂಘದ ಅಧ್ಯಕ್ಷ ಲಕ್ಷ್ಮಣ ಕಲಾಲ, ರವಿಕುಮಾರ ಹಾಸನ, ರಫೀಕ್‌ ಇಂಚಲ, ಫಕೀರಗೌಡ, ನವೀನ ಬಳಿಗೇರ, ಬಸವರಾಜ ಸಕ್ರಿ, ಶಿವಲಿಂಗ, ದೇವೇಂದ್ರ ಮಾಕಣ್ಣವರ, ರವಿ‌ ಬೆಣ್ಣೆ, ಈರಣ್ಣ ಬಾಗಿ, ಬಸವರಾಜ ರಾಮಾಪುರ, ನೂತನ್ ಗಾಣಿಗೇರ, ಶ್ರೀಧರ ಹಿತ್ತಲಮನಿ, ಸಂತೋಷ ವೈ.ಆರ್, ಸುರೇಶ ಬ್ಯಾಲಿಹಾಳ ಸೇರಿದಂತೆ ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

300 ಮೀಟರ್‌ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸುವಂತಿಲ್ಲ

ಪ್ರತಿಭಟನೆ ನಡೆಸಲು ಅವಕಾಶ ಕೋರಿ ಅಭ್ಯರ್ಥಿಗಳು ಮನವಿ ಸಲ್ಲಿಸಿದಾಗ ಸೋಮವಾರ ಮಾತುಕತೆಗೆ ಆಹ್ವಾನಿಸಿದ ಅಧಿಕಾರಿಗಳು, ಮತ್ತೊಂದೆಡೆ ನ್ಯಾಯಾಲಯದಿಂದ ವಾಯವ್ಯ ಸಾರಿಗೆ ಸಂಸ್ಥೆಯ ಆಡಳಿತ ಕಚೇರಿಯ 300 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸದಂತೆ ತಡೆಯಾಜ್ಞೆ ತಂದಿದ್ದಾರೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ನೀಡಿದ್ದು, ಆ ಹಕ್ಕನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಸರ್ಕಾರ ತಕ್ಷಣ ಮಾತುಕತೆ ಆರಂಭಿಸಬೇಕು. ಬುಧವಾರ ಸಂಜೆ ವೇಳೆಯೊಳಗೆ ಸರ್ಕಾರ ಸ್ಪಂದಿಸದಿದ್ದರೆ ನೂರಾರು ಅಭ್ಯರ್ಥಿಗಳು ಆಮರಣಾಂತ ಉಪವಾಸ ಆರಂಭಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಲು ಶಾಲಾ ಸಂಸತ್ ಸಹಕಾರಿ
ಜೋಳ ಖರೀದಿಯ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ