ಒಂದು ವಾರ ಮುಂಚೆಯೇ ಕಬ್ಬು ಕ್ರಷಿಂಗ್ ಆರಂಭ

KannadaprabhaNewsNetwork |  
Published : Nov 07, 2024, 11:46 PM IST
ಶಿವಾನಂದ ಪಾಟೀಲ | Kannada Prabha

ಸಾರಾಂಶ

ನ. 12ರ ವರೆಗೆ ಕ್ರಷಿಂಗ್ ಆರಂಭಿಸಿದ್ದರೆ ಒಂದು ಎಕರೆಗೆ 50ರಿಂದ 60 ಟನ್ ಇಳುವರಿ ಬದಲಿಗೆ ಕೇವಲ 25ರಿಂದ 30 ಟನ್ ಇಳುವರಿ ಬರುವ ಸಾಧ್ಯತೆ ಇದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ನ. 8ರಿಂದ ಕಬ್ಬು ನುರಿಸುವಿಕೆ ಆರಂಭಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ನಡೆದಿದ್ದ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಸಭೆಯಲ್ಲಿ ನ. 15ರಿಂದ ಕಬ್ಬು ನುರಿಸುವಿಕೆ ಆರಂಭಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮೇರೆಗೆ ಒಂದು ವಾರ ಮುಂಚಿತವಾಗಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳು ಮಧ್ಯ ಕರ್ನಾಟಕದಲ್ಲಿ ಬರುತ್ತವೆ. ಈ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಸಮಯದಲ್ಲೇ ಆರಂಭ ಮಾಡಿವೆ. ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು, ನಮ್ಮ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದೆ. ಹೀಗಾಗಿ ಮುಂಚಿತವಾಗಿ ಕ್ರಷಿಂಗ್ ಆರಂಭಿಸಬೇಕು ಎಂದು ಮನವಿ ಮಾಡಿದ್ದವು ಎಂದು ತಿಳಿಸಿದ್ದಾರೆ.

ನ. 12ರ ವರೆಗೆ ಕ್ರಷಿಂಗ್ ಆರಂಭಿಸಿದ್ದರೆ ಒಂದು ಎಕರೆಗೆ 50ರಿಂದ 60 ಟನ್ ಇಳುವರಿ ಬದಲಿಗೆ ಕೇವಲ 25ರಿಂದ 30 ಟನ್ ಇಳುವರಿ ಬರುವ ಸಾಧ್ಯತೆ ಇದೆ. ವಾಡಿಕೆಯಂತೆ ಅಕ್ಟೋಬರ್ ಅಂತ್ಯದೊಳಗೆ ಕ್ರಷಿಂಗ್ ಆರಂಭಿಸಲು ಅನುಮತಿ ನೀಡಬೇಕು ಎಂದು ರೈತರು ಮನವಿ ಮಾಡಿದ್ದರು ಎಂದರು.

ರಾಜ್ಯದಲ್ಲಿ ಒಟ್ಟು 80 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 7.5 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ಬಾರಿ ಕಬ್ಬಿಗೆ ಪ್ರತಿ ಟನ್‌ಗೆ ₹ 3,400 ನಿಗದಿಪಡಿಸಲಾಗಿದೆ. ಕಳೆದ ಹಂಗಾಮಿನಲ್ಲಿ ₹ 3,150 ನಿಗದಿಪಡಿಸಲಾಗಿತ್ತು. ಸಕ್ಕರೆ ಇಳುವರಿ ಪ್ರಮಾಣ ಶೇ. 9.5ರಿಂದ 12ರ ವರೆಗೆ ಬರುತ್ತದೆ. ಸರಾಸರಿ ಇಳುವರಿ ಪ್ರಮಾಣ ಶೇ. 10.5ರಷ್ಟಿದೆ ಎಂದರು.

ಖರೀದಿ ಅವಧಿ ವಿಸ್ತರಣೆ:

ಬೆಂಬಲ ಬೆಲೆಯಲ್ಲಿ ಸೋಯಾಬಿನ್ ಮತ್ತು ಹೆಸರು ಕಾಳು ಖರೀದಿ ಅವಧಿ ವಿಸ್ತರಿಸಲಾಗಿದೆ. ಸೋಯಾಬೀನ್ ಖರೀದಿ ಅವಧಿಯನ್ನು ನ. 20ರ ವರೆಗೆ ವಿಸ್ತರಿಸಿದ್ದು, ಈ ವರೆಗೆ 570 ಕ್ವಿಂಟಲ್ ಮಾತ್ರ ಖರೀದಿ ಮಾಡಲಾಗಿದೆ. ಇನ್ನೂ ರೈತರ ಬಳಿ ದಾಸ್ತಾನು ಇರುವ ಕಾರಣ 20ರ ವರೆಗೆ ಖರೀದಿಸಲಾಗುವುದು. ಹೆಸರು ಕಾಳು ಖರೀದಿ ಅವಧಿಯನ್ನು ನ. 18ರ ವರೆಗೆ ವಿಸ್ತರಿಸಿದ್ದು, ಈ ವರೆಗೆ ಪ್ರತಿ ಕ್ವಿಂಟಲ್‌ಗೆ ₹8,682 ದರದಲ್ಲಿ 1.93 ಲಕ್ಷ ಕ್ವಿಂಟಲ್ ಖರೀದಿಸಲಾಗಿದೆ. ಹೆಚ್ಚಿನ ದಾಸ್ತಾನು ಇರುವ ಕಾರಣ ಖರೀದಿ ಪ್ರಮಾಣ ಹೆಚ್ಚಿಸಿದ್ದು 38,320 ಟನ್ ಖರೀದಿಸಲು ನಿರ್ಧರಿಸಲಾಗಿದೆ. ಈ ಮೊದಲು 22,215 ಟನ್ ಖರೀದಿ ಮಿತಿಗೊಳಿಸಲಾಗಿತ್ತು ಎಂದು ಶಿವಾನಂದ ಪಾಟೀಲ ತಿಳಿಸಿದರು.

ಬೆಂಬಲ ಬೆಲೆಯಲ್ಲಿ ಒಟ್ಟು 6.81 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಸಲಾಗಿದೆ. ಬೆಲೆ ಕುಸಿದಾಗ ಪ್ರತಿ ಕ್ವಿಂಟಲ್‌ಗೆ ₹ 13,500ನಂತೆ ಕೊಬ್ಬರಿ ಖರೀದಿಸಿದ್ದು ಬೆಂಬಲ ಬೆಲೆ ಖರೀದಿ ಆರಂಭಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ₹ 15 ಸಾವಿರ ವರೆಗೆ ಏರಿಕೆಯಾಗಿತ್ತು. ಇದೇ ಮೊದಲ ಬಾರಿಗೆ ಬೆಂಬಲ ಬೆಲೆಯಲ್ಲಿ 8 ಕೃಷಿ ಉತ್ಪನ್ನಗಳ ಖರೀದಿ ಮಾಡುತ್ತಿರುವುದು ವಿಶೇಷ. ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಅನುಕೂಲವಾಗಿದ್ದು, ಶೋಷಣೆ ಮುಕ್ತವಾಗಿದೆ. 2023-24ನೇ ಸಾಲಿನಲ್ಲಿ ಅಕ್ಟೋಬರ್‌ ವರೆಗೆ ₹103 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು. 2024-25ನೇ ಸಾಲಿನ ನವಂಬರ್ ಅಂತ್ಯದ ವೇಳೆಗೆ ₹205 ಕೋಟಿ ಶುಲ್ಕ ಸಂಗ್ರಹವಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!