ಚೆನ್ನೈ ಅಂಗಡಿಯಲ್ಲಿ ಕ್ಯಾಪ್‌ ಖರೀದಿಸಿದ್ದ ಕೆಫೆ ಬಾಂಬರ್‌

KannadaprabhaNewsNetwork |  
Published : Mar 23, 2024, 01:00 AM ISTUpdated : Mar 23, 2024, 12:18 PM IST
Bomb blast 9 | Kannada Prabha

ಸಾರಾಂಶ

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆಗೆ ಆತ ಧರಿಸಿದ್ದ ಬೇಸ್‌ ಬಾಲ್‌ನ ಟೋಪಿ (ಕ್ಯಾಪ್‌) ಮಹತ್ವದ ಮಾಹಿತಿ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆಗೆ ಆತ ಧರಿಸಿದ್ದ ಬೇಸ್‌ ಬಾಲ್‌ನ ಟೋಪಿ (ಕ್ಯಾಪ್‌) ಮಹತ್ವದ ಮಾಹಿತಿ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. 

ಕಳೆದ ಜನವರಿಯಲ್ಲಿ ತಮಿಳುನಾಡಿನ ಚೆನ್ನೈ ನಗರದ ಟೋಪಿ ಮಾರಾಟ ಮಳಿಗೆಯಲ್ಲಿ ತನ್ನ ಸ್ನೇಹಿತನ ಜತೆ ತೆರಳಿ ಆತ ಕ್ಯಾಪ್ ಖರೀದಿಸಿದ್ದು, ಇದಕ್ಕೆ ಪೂರಕವಾಗಿ ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತನ ದೃಶ್ಯ ಮತ್ತು ಕ್ಯಾಪ್ ಖರೀದಿಯ ರಸೀದಿ ಸಹ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ. 

ಮಾ.1ರಂದು ಕೆಫೆಗೆ ಬಾಂಬ್ ಇಡಲು ಬಂದಾಗ ಕ್ಯಾಪ್‌ ಧರಿಸಿದ್ದ ಶಂಕಿತ ವ್ಯಕ್ತಿ, ಈ ಕೃತ್ಯ ಎಸಗಿದ ಬಳಿಕ ಹೂಡಿ ಸಮೀಪದ ಮಸೀದಿಯಲ್ಲಿ ತಾನು ಧರಿಸಿದ್ದ ಶರ್ಟ್ ಹಾಗೂ ಕ್ಯಾಪ್ ಅನ್ನು ಬಿಸಾಕಿ ಪರಾರಿಯಾಗಿದ್ದ. 

ಆ ಮಸೀದಿಯಲ್ಲಿ ಸಿಕ್ಕಿದ ಟೋಪಿ ಹಿಡಿದು ಶಂಕಿತನ ಬೆನ್ನತ್ತಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಬಹುಮುಖ್ಯ ಸುಳಿವು ಲಭ್ಯವಾಗಿದೆ.

ಅಲ್ಲದೆ ಚೆನ್ನೈನಲ್ಲಿ ಶಂಕಿತ ಉಗ್ರ ಕ್ಯಾಪ್‌ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿದ ಎನ್‌ಐಎ, ಆ ಅಂಗಡಿಯಲ್ಲಿ ಆತ ಕ್ಯಾಪ್‌ ಖರೀದಿಸಲು ಬಂದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಸಂಗ್ರಹಿಸಿದೆ ಎನ್ನಲಾಗಿದೆ. 

ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ತೆರಳಿದ ಶಂಕಿತ ವ್ಯಕ್ತಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆತ ಕ್ಯಾಪ್ ಧರಿಸಿದ್ದು, ಆ ಕ್ಯಾಪ್‌ ಮೇಲೆ 10 ಸಂಖ್ಯೆ ಇರುವುದು ಪತ್ತೆಯಾಗಿತ್ತು. 

ಈ ಕ್ಯಾಪ್‌ ಮೇಲಿನ 10ನೇ ಸಂಖ್ಯೆ ಕುರಿತು ಪರಿಶೀಲಿಸಿದಾಗ ಅದು ಬೇಸ್ ಬಾಲ್ ಆಟಗಾರರು ಧರಿಸುವ ಕ್ಯಾಪ್‌ ಎಂಬುದು ಗೊತ್ತಾಯಿತು. ಆ ಕ್ಯಾಪ್ ಅನ್ನು ಪ್ರಮುಖ ಕಂಪನಿ ತಯಾರಿಸಿತ್ತು.

ಆ ಕ್ಯಾಪ್‌ ಬೆಲೆ 350 ರಿಂದ 400 ರು. ಇದ್ದು, ಇಡೀ ದೇಶದಲ್ಲಿ ಆ ಕಂಪನಿಯ ಕ್ಯಾಪ್‌ಗಳು 300 ರಿಂದ 400 ಮಾತ್ರವಷ್ಟೇ ಮಾರಾಟವಾಗಿದ್ದವು. 

ಕೆಫೆ ಬಾಂಬ್ ಸ್ಫೋಟದಲ್ಲಿ ತನ್ನ ಗುರುತು ಮರೆಮಾಚುವ ಸಲುವಾಗಿ ಕ್ಯಾಪ್ ಹಾಕಲು ಯೋಜಿಸಿದ್ದ ದುಷ್ಕರ್ಮಿ, ಜನವರಿಯಲ್ಲಿ ಚೆನ್ನೈನ ಅಂಗಡಿಗೆ ಗೆಳೆಯನ ಜತೆ ತೆರಳಿ ಆ ಕ್ಯಾಪ್ ಖರೀದಿಸಿದ್ದ ಎಂದು ತಿಳಿದು ಬಂದಿದೆ. 

ಅದೇ ಕ್ಯಾಪ್ ಹಾಕುವ ಉದ್ದೇಶ ಬಹುಶಃ ಆತನಿಗೆ ಇರಲಿಲ್ಲ ಅನಿಸುತ್ತದೆ. ಕ್ಯಾಪ್ ಖರೀದಿಗೆ ತೆರಳಿದ್ದಾಗ ಬಹುಶಃ ಆಚಾನಕ್ಕಾಗಿ ಬೇಸ್‌ಬಾಲ್‌ ಕ್ಯಾಪ್‌ ನೋಡಿ ಇಷ್ಟಪಟ್ಟು ಆತ ಖರೀದಿಸಿರಬಹುದು. 

ಇನ್ನು ಆನ್‌ಲೈನ್‌ನಲ್ಲಿ ಸಹ ಆ ಕ್ಯಾಪ್‌ಗಳು ಮಾರಾಟಕ್ಕೆ ಲಭ್ಯ ಇವೆ. ಆದರೆ ಆನ್‌ಲೈನ್‌ನಲ್ಲಿ ಖರೀದಿಸಿದರೆ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅಂಗಡಿಗೆ ಹೋಗಿಯೇ ಆರೋಪಿ ಕ್ಯಾಪ್ ಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.

ಕ್ಯಾಪ್‌ನಲ್ಲಿ ಕೂದಲು ಪತ್ತೆ?
ಶಂಕಿತ ವ್ಯಕ್ತಿ ಧರಿಸಿದ್ದ ಕ್ಯಾಪ್‌ನಲ್ಲಿ ಕೂದಲು ಪತ್ತೆಯಾಗಿದ್ದು, ಆ ಕೂದಲಿನ ಡಿಎನ್‌ಎ ಪರೀಕ್ಷೆ ನಡೆಸಿ ಶಂಕಿತ ವ್ಯಕ್ತಿಯ ಗುರುತನ್ನು ವೈಜ್ಞಾನಿಕವಾಗಿ ಸ್ಪಷ್ಟಪಡಿಸಿಕೊಳ್ಳಲು ಎನ್‌ಐಎ ಯೋಜಿಸಿದೆ ಎಂದು ತಿಳಿದು ಬಂದಿದೆ. 

ರಾಜ್ಯದಲ್ಲಿ ಭಯೋತ್ಪಾದಕ ವಿಧ್ವಂಸಕ ಕೃತ್ಯಗಳ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರಿರುವ ಹಾಗೂ ಆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರರ ಕುಟುಂಬದ ಸದಸ್ಯರ ಕೂದಲು ಸಂಗ್ರಹಿಸಿ ಬಳಿಕ ಆ ಕೂದಲಿಗೂ ಕೆಫೆ ಶಂಕಿತನ ಕ್ಯಾಪ್‌ನಲ್ಲಿ ಪತ್ತೆಯಾದ ಕೂದಲನ್ನು ಪರೀಕ್ಷೆಗೊಳಪಡಿಸಲು ಎನ್‌ಐಎ ಮುಂದಾಗಿದೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ