ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾವೇರಿ ಹಾಗೂ ಕೊಳವೆಬಾವಿಗಳ ನೀರಿನ ಪ್ರಮಾಣವನ್ನು ಮ್ಯಾಪಿಂಗ್ ಮಾಡಲಾಗುವುದು. ಸರಾಸರಿ ಬಳಕೆಗಿಂತ ಹೆಚ್ಚು ನೀರು ಬಳಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನೀರಿನ ಕೊರತೆ ನೀಗಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಮುಖವಾಗಿ ಪ್ರತಿ ನಲ್ಲಿಗಳಿಗೂ ಏರೇಟರ್ ಅಳವಡಿಕೆ, ಶುದ್ಧೀಕರಿಸಿದ ನೀರಿನ ಬಳಕೆ ಹೆಚ್ಚಿಸುವುದು, ಮರುಬಳಕೆ ನೀರನ್ನು ಕೆರೆಗೆ ತುಂಬಿಸುವ ಕೆಲಸ ಮಾಡಲಾಗುವುದು. ಈ ಎಲ್ಲ ಕ್ರಮದಿಂದ 2026ರ ಜುಲೈ 1ರಷ್ಟರಲ್ಲಿ ಬೆಂಗಳೂರಿನ ಅಂತರ್ಜಲ ವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ನೀರಿನ ಬಳಕೆ ಬಗ್ಗೆ ನಿಗಾ: ಜಲಮಂಡಳಿ ಅಂದಾಜಿನಂತೆ ಒಂದು ಕುಟುಂಬಕ್ಕೆ ಮಾಸಿಕ 18 ಸಾವಿರ ಲೀಟರ್ ನೀರಿನ ಅವಶ್ಯಕತೆಯಿದೆ. ಅದಕ್ಕೆ ತಕ್ಕಂತೆ ಸದ್ಯ ನೀರು ಪೂರೈಸಲಾಗುತ್ತಿದೆ. ಆದರೆ, ಕೆಲವೊಮ್ಮ ಈ ನೀರಿನ ಬಳಕೆ ಹೆಚ್ಚಾಗಿ ಬೇರೆಡೆಗೆ ನೀರಿನ ಕೊರತೆ ಉಂಟಾಗುತ್ತದೆ.
ಹೀಗಾಗಿ ಹೋಟೆಲ್, ಕೈಗಾರಿಕಾ ಪ್ರದೇಶ, ವಸತಿ ಪ್ರದೇಶಗಳಲ್ಲಿ ನೀರಿನ ಬಳಕೆ ಪ್ರಮಾಣವನ್ನು ಮೀರುವವರ ಮೇಲೆ ನಿಗಾವಹಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತಿ ನೀರಿನ ಸಂಪರ್ಕವನ್ನು ಮ್ಯಾಪಿಂಗ್ ಮಾಡಲಾಗುವುದು ಎಂದು ಅವರು ಹೇಳಿದರು.
₹10ಕ್ಕೆ 1 ಸಾವಿರ ಲೀ. ನೀರು: ನೀರಿನ ಅಭಾವವನ್ನು ಸರಿದೂಗಿಸಲು ಸಂಸ್ಕರಿಸಿದ ನೀರಿನ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸದ್ಯ ಜಲಮಂಡಳಿಯ ಸಂಸ್ಕರಣಾ ಘಟಕಗಳಿಂದ 1,300 ಎಂಎಲ್‌ಡಿ ನೀರು ಸಂಸ್ಕರಿಸಲಾಗುತ್ತಿದೆ.
ಪ್ರಮುಖವಾಗಿ ಹೋಟೆಲ್, ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಕರಿಸಿದ ನೀರಿನ ಬಳಕೆಗೆ ಉತ್ತೇಜಿಸಲಾಗುತ್ತಿದೆ. ಸಂಸ್ಕರಿಸಿದ ನೀರನ್ನು 1 ಸಾವಿರ ಲೀಟರ್‌ಗೆ ₹10 ಶುಲ್ಕ ವಿಧಿಸಲಾಗುತ್ತದೆ ಎಂದು ರಾಮ್‌ಪ್ರಸಾತ್ ಮನೋಹರ್ ವಿವರಿಸಿದರು.
ಒಂದು ಬೋರ್‌ವೆಲ್‌ಗೆ 2 ಇಂಗುಗುಂಡಿ ಕಡ್ಡಾಯ: ಅಂತರ್ಜಲ ವೃದ್ಧಿಗಾಗಿ ಮಳೆ ನೀರು ಇಂಗುಗುಂಡಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಲಮಂಡಳಿಯಿಂದ ಕೊಳವೆಬಾವಿ ಕೊರೆಸಿದರೆ ಎರಡು ಇಂಗುಗುಂಡಿ ನಿರ್ಮಿಸಲಾಗುವುದು. ಅದೇ ರೀತಿ ಸಾರ್ವಜನಿಕರು ಖಾಸಗಿಯಾಗಿ ಕೊಳವೆ ಬಾವಿ ಕೊರೆಸಿದರೆ ಇಂಗುಗುಂಡಿ ನಿರ್ಮಿಸಬೇಕು.
ಒಂದು ವೇಳೆ ಇಂಗುಗುಂಡಿ ನಿರ್ಮಾಣಕ್ಕೆ ಜಾಗದ ಅಭಾವವಿದ್ದರೆ, ಉದ್ಯಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜಲಮಂಡಳಿಯೇ ಜಾಗ ಗುರುತಿಸಿಕೊಡಲಿದೆ. ಒಂದು ವೇಳೆ ಇಂಗು ಗುಂಡಿ ನಿರ್ಮಿಸದಿದ್ದರೆ, ಅಂತಹವರಿಂದ ಶುಲ್ಕ ವಸೂಲಿ ಮಾಡಿ ಜಲಮಂಡಳಿಯೇ ಇಂಗುಗುಂಡಿ ನಿರ್ಮಿಸಲಿದೆ ಎಂದು ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
ನೀರು ದುರ್ಬಳಕೆ ಪತ್ತೆಗೆ ಅಭಿಯಾನ: ಕುಡಿಯಲು ಮತ್ತು ಗೃಹ ಬಳಕೆಗೆ ಹೊರತುಪಡಿಸಿ ವಾಹನ ಸ್ವಚ್ಛತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಕಾವೇರಿ ಮತ್ತು ಕೊಳವೆಬಾವಿ ನೀರು ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈವರೆಗೆ 3 ಮಂದಿಯ ವಿರುದ್ಧ ಕ್ರಮ ಕೈಗೊಂಡು ತಲಾ ₹5 ಸಾವಿರ ದಂಡ ವಸೂಲಿ ಮಾಡಲಾಗಿದೆ.
ಮಾ.25ರಿಂದ ನೀರು ದುರ್ಬಳಕೆ ಮಾಡುವವರ ಪತ್ತೆಗೆ ಅಭಿಯಾನ ನಡೆಸಲಾಗುವುದು. ನೀರಿನ ಮಹತ್ವದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ರಾಮ್‌ಪ್ರಸಾತ್ ವಿವರಿಸಿದರು.