ಹೋಟೆಲ್‌ಗಳಲ್ಲಿ ಸ್ವಚ್ಛತೆಗೆ ಸಂಸ್ಕರಿಸಿದ ನೀರು ಬಳಸಿ; ನೀರು ಉಳಿಸುವ ಹೋಟೆಲ್‌ಗೆ ಗ್ರೀನ್‌ ಸ್ಟಾರ್‌ ರೇಟಿಂಗ್‌

KannadaprabhaNewsNetwork | Published : Mar 22, 2024 2:17 AM

ಸಾರಾಂಶ

ನಗರದ ಹೋಟೆಲ್‌ಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಮತ್ತು ಉದ್ಯಾನಗಳಿಗೆ ಬಳಸಲು ಏ.1ರಿಂದ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರು ಪೂರೈಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಹೋಟೆಲ್‌ಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಮತ್ತು ಉದ್ಯಾನಗಳಿಗೆ ಬಳಸಲು ಏ.1ರಿಂದ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರು ಪೂರೈಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಗುರುವಾರ ಹೋಟೆಲ್‌ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಡಾ। ರಾಮ್‌ಪ್ರಸಾತ್‌ ಮನೋಹರ್‌, ಹೆಚ್ಚು ನೀರು ಬಳಕೆ ಮಾಡುವ ಹಾಗೂ ಹೆಚ್ಚಿನ ಜನರು ಬರುವ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ನೀರನ್ನು ಉಳಿಸಲು ಸ್ವಚ್ಛತಾ ಕಾರ್ಯಗಳಿಗೆ ಸಂಸ್ಕರಿಸಿದ ನೀರನ್ನು ಬಳಸಬೇಕು. ಅಗತ್ಯವಿರುವ ಸಂಸ್ಕರಿಸಿದ ನೀರನ್ನು ಜಲಮಂಡಳಿಯಿಂದ ರಿಯಾಯಿತಿ ದರದಲ್ಲಿ ಪೂರೈಸಲಾಗುವುದು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿನ ಎಲ್ಲ ನಲ್ಲಿಗಳಿಗೂ ಏರೇಟರ್ ಅಳವಡಿಸಬೇಕು ಎಂದರು.

ಹೋಟೇಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ನೀರಿನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನೀರಿನ ಉಳಿತಾಯದ ಕುರಿತು ಸ್ಟಿಕ್ಕರ್‌ಗಳನ್ನು ಅಂಟಿಸಬೇಕು. ಅದನ್ನು ಜಲಮಂಡಳಿಯಿಂದಲೇ ಒದಗಿಸಲಾಗುವುದು. ಜತೆಗೆ ನೀರಿನ ಉಳಿತಾಯ, ಮರುಬಳಕೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಹೋಟೆಲ್‌ಗಳಿಗೆ ಜಲಮಂಡಳಿಯಿಂದ ಗ್ರೀನ್‌ ಸ್ಟಾರ್‌ ರೇಟಿಂಗ್‌ ನೀಡಿ, ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದರು.

ದಕ್ಷಿಣ ಭಾರತ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘದ ಅಧ್ಯಕ್ಷ ಚಾಮರಾಜ ಇದ್ದರು.

- - -

ಏರೇಟರ್‌ ಅಳವಡಿಸದಿದ್ದರೆ ಶೇ.50ರಷ್ಟು ನೀರು ಕಡಿತಕನ್ನಡಪ್ರಭ ವಾರ್ತೆ ಬೆಂಗಳೂರುನೀರು ಬಳಕೆ ಮಿತವಾಗಿಸಲು ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಅಪಾರ್ಟ್‌ಮೆಂಟ್‌ ಸೇರಿದಂತೆ ಇನ್ನಿತರ ಕಟ್ಟಡಗಳ ನಲ್ಲಿಗಳಿಗೆ ಮಾ. 31ರೊಳಗೆ ಫ್ಲೋ ರಿಸ್ಟ್ರಿಕ್ಟರ್‌ ಅಥವಾ ಏರೇಟರ್‌ನ್ನು ಅಳವಡಿಸದಿದ್ದರೆ ಸದ್ಯ ಪೂರೈಸಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 50ರಷ್ಟು ಕಡಿತಗೊಳಿಸುವುದಾಗಿ ಜಲಮಂಡಳಿ ಆದೇಶಿಸಿದೆ.ನಗರದಲ್ಲಿ ನೀರಿನ ಅಭಾವ ಹೆಚ್ಚುತ್ತಿದ್ದು, ಅದನ್ನು ಸರಿದೂಗಿಸಲು ನಾನಾ ಕ್ರಮ ಕೈಗೊಳ್ಳಲಾಗುತ್ತಿದೆ. ಪೂರಕವಾಗಿ ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಅಪಾರ್ಟ್‌ಮೆಂಟ್‌, ಹೋಟೆಲ್‌, ಸರ್ಕಾರಿ ಕಟ್ಟಡಗಳು ಹಾಗೂ ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಫ್ಲೋ ರಿಸ್ಟ್ರಿಕ್ಟರ್‌ ಅಥವಾ ಏರೇಟರ್‌ನ್ನು ಅಳವಡಿಸದಿದ್ದರೆ ಜಲಮಂಡಳಿಯಿಂದ ಸರಬರಾಜು ಮಾಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 50ರಷ್ಟು ಕಡಿತಗೊಳಿಸುವುದಾಗಿ ತಿಳಿಸಿದೆ. ಅದರ ಜತೆಗೆ ಜಲಮಂಡಳಿ ಕಾಯ್ದೆ 1964ರ ಕಲಂ 109ರಂತೆ ₹5 ಸಾವಿರ ದಂಡ ವಿಧಿಸಲಾಗುವುದು ಎಂದೂ ಹೇಳಿದೆ.ನಲ್ಲಿಗಳಿಗೆ ಫ್ಲೋ ರಿಸ್ಟ್ರಿಕ್ಟರ್‌ ಅಥವಾ ಏರೇಟರ್‌ ಅಳವಡಿಕೆ ಮಾಡದಿರುವುದು ಕಂಡು ಬಂದರೆ ಸಾರ್ವಜನಿಕರು ಜಲಮಂಡಳಿಯ ಸಹಾಯವಾಣಿ 1916ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

Share this article