ಕನ್ನಡಪ್ರಭ ವಾರ್ತೆ ಹಲಗೂರು
ಪಟ್ಟಣದ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ಸಿಪಿಐ(ಎಂ) ಹಲಗೂರು ಶಾಖೆ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ರೈತರು ನೆಮ್ಮದಿಯಿಂದ ಬದುಕಲು ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರೈತರು ಬೆಳೆದ ಬೆಳೆಗಳಿಗೆ ತಗಲುವ ವೆಚ್ಚದ ಜೊತೆಗೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು. ದೇಶದಲ್ಲಿ 80 ಕೋಟಿ ಕೃಷಿಕರು ಇದ್ದಾರೆ, ಇವರ ಹೆಸರೇಳಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆದರೆ, ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಇಂದು 10 ಎಕರೆ ಜಮೀನು ಉಳ್ಳಂತಹ ರೈತ ತನ್ನ ಮಗನನ್ನು ಮತ್ತೆ ರೈತನಾಗಲಿ ಎಂದು ಬಯಸುವುದಿಲ್ಲ. ಅದರ ಬದಲು ಸರ್ಕಾರಿ ಗುಮಾಸ್ತನಾಗಲು ಬಾಗಿಲು ಕಾಯುವ ಜವಾನನಾಗಲು ಬಯಸುತ್ತಾನೆಂದರೆ ಕೃಷಿಯಿಂದ ರೈತ ಎಷ್ಟೊಂದು ಬೇಸರ ಉಳ್ಳವನಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣ ಮಾಡಿ ಎಂಎಸ್ ಪಿ ನಿಗದಿಪಡಿಸಿ ರೈತರ ಆತ್ಮಹತ್ಯೆ ತಡೆಗಟ್ಟಲು ರೈತರ ಮಕ್ಕಳಿಗೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆಂದು ಹೇಳಿ ಜನರನ್ನು ವಂಚಿಸಿದ್ದಾರೆ. ಜನರ ಸಮಸ್ಯೆಗಳನ್ನು ಮರೆಮಾಚಲು ಕೋಮುವಾದಿ ಬಿಜೆಪಿ ಪ್ರತಿನಿತ್ಯ ದ್ವೇಷ, ಅಸೂಯೆ, ಅಸಹಕಾರ ಜನರಲ್ಲಿ ಬಿತ್ತಿ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಹಲಗೂರು ಶಾಖಾ ಕಾರ್ಯದರ್ಶಿ ಎ.ಎಲ್.ಶಿವಕುಮಾರ್ ಅದ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ) ನ ಜಿಲ್ಲಾ ಸಮಿತಿ ಸದಸ್ಯರಾದ ಎನ್.ಲಿಂಗರಾಜಮೂರ್ತಿ, ಮಂಜುಳ, ಪ್ರಮೀಳಾ ಮಹಾದೇವು, ಲಕ್ಷ್ಮೀ , ಸಣ್ಣಶೆಟ್ಟಿ, ಹೊನ್ನಪ್ಪ, ಗಣೇಶ್, ಮಹಾದೇವು ಉಪಸ್ಥಿತರಿದ್ದರು.