ಬಳ್ಳಿಗನೂರು ಗ್ರಾಮ ಪಂಚಾಯ್ತಿ ಮಟ್ಟದ ಜನಸಂಪರ್ಕ ಸಭೆ । ಎಲ್ಲಾ ಸಮಸ್ಯೆಗಳಿಗೂ ಶೀಘ್ರ ಪರಿಹಾರ
ಕನ್ನಡಪ್ರಭ ವಾರ್ತೆ, ಬೀರೂರು.ಕಡೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಚಿರತೆಗಳಿರುವ ಮಾಹಿತಿ ಇದ್ದು ಮನುಷ್ಯರು ದಾಳಿ ಮತ್ತು ಮೈ ಮೇಲರಗುವ ಚಿರತೆಗಳನ್ನು ಕೂಡಲೇ ಅರಣ್ಯ ಇಲಾಖೆಯವರು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ಎಸ್.ಆನಂದ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಬೀರೂರು ಹೋಬಳಿ ವ್ಯಾಪ್ತಿಯ ಬಳ್ಳಿಗನೂರು ಗ್ರಾಪಂ ಮಟ್ಟದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಂಪರ್ಕ ಸಭೆಯಲ್ಲಿ ಕೋಡಿಹಳ್ಳಿ, ಬಳ್ಳಿಗನೂರು ಹೊಗರೇಹಳ್ಳಿ ಭಾಗದ ರೈತರು ಇತ್ತೀಚಿಗಷ್ಟೆ ಗ್ರಾಮದ ಸಮೀಪದ ಮುಂಡ್ರೆ ಗ್ರಾಮದಲ್ಲಿ 6 ವರ್ಷದ ಮಗುವನ್ನು ಚಿರತೆ ಎತ್ತೋಯ್ದು ತಿಂದಿದೆ. ಹೊಲ ಜಮೀನುಗಳಿಗೆ ರೈತರು ತೆರಳಲು ಕಷ್ಟ ಸಾಧ್ಯವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕೂತ ಪರಿಣಾಮ ನಮಗೆ ದಿಕ್ಕೆ ತೋಚದಂತಾಗಿದೆ. ಮನುಷ್ಯನ ಸಾವಿಗೆ ಬೆಲೆಯಿಲ್ಲದಂತಾಗಿದೆ ಎಂದರು.ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ಹರೀಶ್, ಕಡೂರು ತಾಲೂಕು ವ್ಯಾಪ್ತಿ 130 ಚಿರತೆಗಳು ಇರುವ ಮಾಹಿತಿ ಇದೆ. ಚಿರತೆ ದಾಳಿಗೆ ಸಂಬಂದಪಟ್ಟಂತೆ ಎಲ್ಲಿ ಅನಾಹುತಗಳು ನಡೆದಿದೆಯೋ ಆ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 7 ಬೋನುಗಳನ್ನು ಇಟ್ಟು ಚಿರತೆ ಸೆರೆಗೆ ಏನು ಬೇಕೋ ಅವುಗಳ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಉತ್ತರ ನೀಡಿದರು.ನನಗೆ ಬಂದ ಮಾಹಿತಿ ಪ್ರಕಾರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಚಿರತೆಗಳಿವೆ ಎಂದ ಶಾಸಕರು ಮನುಷ್ಯರು ತಾವು ಬದುಕಬೇಕೆನ್ನುವ ದೃಷ್ಠಿಯಿಂದ ಕಾಡು ನಾಶ ಪಡಿಸಿದ ಹಿನ್ನಲೆಯಲ್ಲಿ ಕಾಡು ಪ್ರಾಣಿಗಳು ಆಹಾರವನ್ನರಿಸಿ ನಾಡಿಗೆ ಬರುವುದು ಸಾಮಾನ್ಯ. ಕಾಡಿನಲ್ಲಿ ಅವುಗಳ ಸಂತಾನ ಜಾಸ್ತಿಯಾಗುತ್ತಿದೆ. ಆದರೆ ಎಲ್ಲಿ ಮನುಷ್ಯರ ಮೇಲೆ ದಾಳಿ ಮಾಡಲಾಗುತ್ತಿದೆಯೋ ಅಂತಹ ಕಡೆ ಹೆಚ್ಚಿನ ಬೋನು ಇಡಿ ಎಂದರು.ಬಳ್ಳಿಗನೂರು , ಹೊಗರೇಹಳ್ಳಿ ಗ್ರಾಮಸ್ಥರು ಈ ಭಾಗಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚು ಎದುರಾಗಿದೆ. ನಮಗೆ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡಲು ತಹಸೀಲ್ದಾರ್ ಜಾಗ ನೀಡಿಲ್ಲವೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸುತ್ತಾರೆ. ಸುತ್ತಮುತ್ತಲಿನ ರೈತರ ಪಾಡು ಹೇಳತೀರಲಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.ಇದಕ್ಕೆ ಉತ್ತರಿಸಿದ ಶಾಸಕ ಆನಂದ್ , ನಾನು ಶಾಸಕನಾದ ಮೇಲೆ ಈ ಸಮಸ್ಯೆಗೆ ಈತಿಶ್ರೀ ಹಾಡಲು ವಿದ್ಯುತ್ ನೀಡುವ ಬೋರ್ಡ ನ ಸಚಿವರೊಂದಿಗೆ ಚರ್ಚಿಸಿ ಎಂ.ಯು.ಎಸ್.ಎಸ್. ಘಟಕ ನಿರ್ಮಾಣಕ್ಕೆ ಸುಮಾರು ₹22ಕೋಟಿ ವೆಚ್ಚವಾಗುತ್ತದೆ. ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಕೋರಲಾಗಿದೆ. ಆದರೆ ಕಂದಾಯ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಜಾಗ ನೀಡಿದರೇ ಎಲ್ಲರಿಗೂ ಒಳಿತಾಗಿ ಸಮಸ್ಯೆ ಬಗೆಹರಿಯಲಿದೆ ಎಂದರು.ಜನಸಂಪರ್ಕ ಸಭೆಯಲ್ಲಿ ಇ-ಸ್ವತ್ತು, ಸಾಗುವಳಿ, ಟ್ಯಾಂಕ್ ದುರಸ್ತಿ, ರಸ್ತೆ ನಿರ್ಮಾಣ , ಪಹಣಿ, ಸೇರಿದಂತೆ ಮತ್ತಿತರ ಸಮಸ್ಯೆಗಳು ಸೇರಿದಂತೆ ನಾಗರೀಕರು ಶಾಸಕರ ಗಮನಕ್ಕೆ ತಂದರು.ಇದಕ್ಕೆ ಉತ್ತರಿಸಿದ ಶಾಸಕ ಅನಂದ್ ನಿಮ್ಮ ಸಮಸ್ಯೆ ಬಗೆಹರಿಸಲೆಂದೇ ತಾಲೂಕು ಕಂದಾಯ ಆಡಳಿತ ಸೇರಿದಂತೆ ವಿವಿಧ 28ಕ್ಕು ಅಧಿಕ ತಾಳೂಕು ಮಟ್ಟದ ಅಧಿಕಾರಿಗಳನ್ನು ಸಭೆಗೆ ಕರೆಸಲಾಗಿದ್ದು ಹಂತ-ಹಂತವಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ, ಇಒ ಪ್ರವೀಣ್, ಬಳ್ಳಿಗನೂರು ಗ್ರಾ,ಪಂ ಅಧ್ಯಕ್ಷೆ ರುಕ್ಮಿಣಿಬಾಯಿ, ಸದಸ್ಯರಾದ ಹರೀಶ್, ಚಂದ್ರಪ್ಪ, ರೂಪ ಬಸವರಾಜ್, ರತ್ನಮ್ಮ ರಾಜಪ್ಪ, ಪ್ರಕಾಶ್ ನಾಯ್ಕ್, ಸುರೇಶ್, ರಾಘವೇಂದ್ರ, ದಿವ್ಯಶ್ರೀ ದೇವ ರಾಜ್, ಮಂಜುಳ ಚಂದ್ರನಾಯ್ಕ್, ರಾಮಪ್ಪ, ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್ ಐ ಡಿ.ವಿ ತಿಪ್ಪೇಶ್, ಬಗರ್ ಹುಕಂ ಕಮಿಟಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್ , ಪಿಡಿಒ ದಯಾನಂದ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು, ಕಾಂಗ್ರೆಸ್ ಕಾರ್ಯಕರ್ತರು , ವಿವಿಧ ಸಮಾಜದ ಮುಖಂಡರು ಇದ್ದರು.29 ಬೀರೂರು 1ಬೀರೂರು ಹೋಬಳಿಯ ಬಳ್ಳಿಗನೂರು ಗ್ರಾಪಂ ಮಟ್ಟದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು. ತಹಸೀಲ್ದಾರ್ ಪೂರ್ಣಿಮಾ, ಇಒ ಪ್ರವೀಣ್, ಗ್ರಾ.ಪಂ.ಅಧ್ಯಕ್ಷೆ ರುಕ್ಷ್ಮಿಣಿ ಬಾಯಿ, ಶಶಿಕುಮಾರ್ ಇದ್ದರು.