ಕಾರು ಅಪಘಾತ, ಸಚಿವೆ ಹೆಬ್ಬಾಳಕರ ಆರೋಗ್ಯ ಚೇತರಿಕೆ: ಡಾ.ರವಿ ಪಾಟೀಲ

KannadaprabhaNewsNetwork | Published : Jan 16, 2025 12:46 AM

ಸಾರಾಂಶ

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ 2ನೇ ದಿನವೂ ಚಿಕಿತ್ಸೆ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ 2ನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಇದೆ ವೇಳೆ ನಾಯಿಗಳು ಅಡ್ಡ ಬಂದಿರುವುದು ಅಪಘಾತಕ್ಕೆ ಕಾರಣವೆಂದು ಹೇಳಲಾಗಿತ್ತು. ನಂತರ ಹಿಟ್‌ ಆ್ಯಂಡ್‌ ರನ್‌ ಅಪಘಾತಕ್ಕೆ ಕಾರಣವಾಗಿದೆ ಎಂದು ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಸಚಿವರ ಬೆನ್ನುಹುರಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ವೈದ್ಯ ಡಾ.ರವಿ ಪಾಟೀಲ ತಿಳಿಸಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಲಕ್ಷ್ಮೀ ಹೆಬ್ಬಾಳಕರ ಮಂಗಳವಾರ ಇಡೀ ದಿನ ಜ್ಯೂಸ್‌ ಸೇವಿಸಿದ್ದಾರೆ. ಈಗ ಎರಡನೇ ದಿನವೂ ಆಸ್ಪತ್ರೆಯಲ್ಲಿಯೇ ಇದ್ದಾರೆ. ಬುಧವಾರ ಆಸ್ಪತ್ರೆಗೆ ಹೆಬ್ಬಾಳಕರ ಪುತ್ರ ಮೃಣಾಲ್‌ ಮತ್ತು ಸೊಸೆ ಹಿತಾ ಅವರು ಭೇಟಿ ನೀಡಿ, ಲಕ್ಷ್ಮೀ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೇ, ಹರಿಹರದ ಪಂಚಮಸಾಲಿ ಪೀಠದ ವಚನಾಂದ ಸ್ವಾಮೀಜಿ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರೊರಂದಿಗೆ ಮಾತನಾಡಿದ ಹರಿಹರದ ವಚನಾನಂದ ಶ್ರೀಗಳು, ನಮ್ಮ ಸಮುದಾಯ ನಾಡಿನ ಪ್ರತಿಭಾವಂತ ಜನಪ್ರಿಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಕಾರು ಅಪಘಾತದಲ್ಲಿ ಗಾಯ ಆಗಿದೆ. ಹೆಬ್ಬಾಳಕರ ಅಪಘಾತ ನಮಗೆಲ್ಲ ಆಘಾತ ತಂದಿದೆ. ನಾನು ಹರ ಜಾತ್ರೆಯಲ್ಲಿ ಇರುವುದರಿಂದ ತಡವಾಗಿ ಮಾಹಿತಿ ಬಂತು. ಹಾಗಾಗಿ, ಈಗ ಅ‍ವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದರು.

ಸಚಿವೆ ಹೆಬ್ಬಾಳಕರ್ ಬಹಳ ಆರೋಗ್ಯವಾಗಿದ್ದಾರೆ, ಅವರ ಜತೆಗೆ ಹತ್ತಾರ ನಿಮಿಷ ಮಾತನಾಡಿರುವೆ. ಅವರ ಧೈರ್ಯ, ಸ್ಥೈರ್ಯವನ್ನ ಮೆಚ್ಚಬೇಕು. ಅವರ ಮುಖದಲ್ಲಿ ಯಾವುದೇ ರೀತಿಯ ಅಪಘಾತದ ಭಾವನೆಗಳು ಇಲ್ಲ. ಅವರಲ್ಲಿ ಅದಮ್ಯ ಧೀಮಂತ ಶಕ್ತಿ ಇದೆ. ಬೇಗ ಗುಣಮುಖವಾಗಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುವೆ. ಜನಸೇವೆಯಲ್ಲಿ‌ ಕ್ರೀಯಾಶೀಲವಾಗಲಿ ಎಂದು ಹಾರೈಸಿದರು.

ಹೆಬ್ಬಾಳಕರ ಅಪಘಾತ ನಮಗೆ ಬಹಳ ಖೇದ ಆಗಿದೆ, ಅವರಿಗೆ ಬೇಕಿರೋದು ಚಿಕಿತ್ಸೆಯಲ್ಲ. ವಿಶ್ರಾಂತಿ ಬೇಕಿದೆ. ಹರ ಮತ್ತು ಚೆನ್ನಮ್ಮನ ಆಶೀರ್ವಾದದಿಂದ ಹೆಬ್ಬಾಳ್ಕರ್‌ಗೆ ಗಂಭೀರ ಗಾಯವಾಗಿಲ್ಲ. ಹೆಬ್ಬಾಳಕರ್‌ಗೆ ಒಂದು ತಿಂಗಳು ಸರಿಯಾದ ಬೆಡ್ ರೆಸ್ಟ್‌ ಬೇಕು. ವೈದ್ಯರು ಹೇಳಿದ ಹಾಗೆ ಹೆಬ್ಬಾಳಕರ್ ರೆಸ್ಟ್ ಪಡೆದುಕೊಳ್ಳಬೇಕು ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ಅಪಘಾತದಲ್ಲಿ ಗಾಯಗೊಂಡಿರುವ ಲಕ್ಷ್ಮೀ ಹೆಬ್ಬಾಳಕರ ಬೇಗನೆ ಗುಣಮುಖರಾಗಲೆಂದು ಹಿರೇಬಾಗೇವಾಡಿಯ ಪಡೀಬಸವೇಶ್ವರ ದೇವಸ್ಥಾನದಲ್ಲಿ ಹೆಬ್ಬಾಳಕರ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದರು.

ಅಪಘಾತಕ್ಕೆ ಹಿಟ್‌ ಆ್ಯಂಡ್‌ ರನ್‌ ಕಾರಣ:

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಾಹನ ಅಪಘಾತ ಹಿಟ್‌ ಆ್ಯಂಡ್‌ ರನ್‌ನಿಂದ ಆಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ವಾಹನ ಅಪಘಾತ ಸಂಬಂಧ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಶಿವಪ್ರಸಾದ್ ಗಂಗಾಧರಯ್ಯ ಕಿತ್ತೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಬಡಗಟ್ಟಿ ಕ್ರಾಸ್ ಬಳಿ ಕಂಟೇನರ್ ಎಡಗಡೆಯಿಂದ ಬಲಗಡೆ ಬಂದಿದೆ. ಆಗ ಕಂಟೇನರ್ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ವಾಹನಕ್ಕೆ ತಾಗಿದೆ. ಅಪಘಾತ ತಪ್ಪಿಸಲು ಹೋಗಿ ಹೆಬ್ಬಾಳ್ಕರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ವಿವರಿಸಿದರು.

ಘಟನೆ ಬಳಿಕ ವಾಹನವನ್ನು ಟೊಯೋಟಾ ಶೂರೂಂಗೆ ಸಾಗಿಸಲಾಗಿತ್ತು. ವಾಹನ ಪರಿಶೀಲನೆ ನಡೆಸಿದಾಗ ಕ್ಯಾಂಟರ್ ಡಿಕ್ಕಿ ಹೊಡೆದಿರುವುದು ಗೊತ್ತಾಗಿದೆ. ಸಚಿವರ ಕಡೆಯವರೇ ಟೋವಿಂಗ್ ವಾಹನಕ್ಕೆ ಫೋನ್ ಮಾಡಿ ಅಪಘಾತಕ್ಕೀಡಾದ ವಾಹನ ಶಿಫ್ಟ್ ಮಾಡಿದ್ದಾರೆ. ಕಂಟೇನರ್ ಚಾಲಕ ಅಪಘಾತ ಬಳಿಕ ನಿಲ್ಲಿಸದೇ ಓಡಿ ಹೋಗಿ ತಪ್ಪು ಮಾಡಿದ್ದಾರೆ. ಹಿಟ್ ಆ್ಯಂಡ್ ರನ್ ಆದಾಗ ತಕ್ಷಣವೇ ನೆರವು ಒದಗಿಸಬೇಕು ಎಂದು ಕಾನೂನಿದೆ. ಅಪಘಾತ ಎಸಗಿದ ತಕ್ಷಣವೇ ಓಡಿ ಹೋಗದೇ ಅಪಘಾತಕ್ಕೆ ಒಳಗಾದವರ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದರು.

ಹೆಬ್ಬಾಳ್ಕರ್ ವಾಹನ ಅಪಘಾತ ಪ್ರಕರಣ ಹಿಟ್ ಆ್ಯಂಡ್ ರನ್ ಆಗಿದೆ. ಗನ್ ಮ್ಯಾನ್ ನೀಡಿದ ಅರ್ಜಿಯಲ್ಲಿ ಕ್ಲಾರಿಟಿ ಇರಲಿಲ್ಲ. ಈ ಕಾರಣಕ್ಕೆ ‌ಚಾಲಕನಿಂದ ಅರ್ಜಿ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ. ಅಪಘಾತದ ಅವಧಿಯ ನಂತರ ಟೋಲ್ ದಾಟಿ 42 ವಾಹನ ದಾಟಿ ಹೋಗಿವೆ. ಎರಡು ತಂಡ ರಚನೆ ಮಾಡಿ 42 ವಾಹನಗಳ ಪರಿಶೀಲನೆ ಮಾಡಲಾಗುತ್ತಿದೆ. ಘಟನೆಯನ್ನು ನೋಡಿದರೆ ಇದೇನೂ ಪೂರ್ವ ನಿಯೋಜಿತ ಕೃತ್ಯ ಎನಿಸುವುದಿಲ್ಲ ಎಂದು ಹೇಳಿದರು.-----------

ಸಚಿವೆ ಗುಣಮುಖರಾಗಲು ವಿಶೇಷ ಪೂಜೆ

ಕಾರು ಅಪಘಾತವಾಗಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲೆಂದು ಅವರ ಸ್ವಕ್ಷೇತ್ರ ಹಿರೇಬಾಗಿವಾಡಿಯ ಉದ್ಭವ ಮೂರ್ತಿ ಪಡೀಬಸವೇಶ್ವರ ದೇಗುಲದಲ್ಲಿ ಸಚಿವರ ಆಪ್ತ ಅಡಿವೇಶ ಇಟಗಿ ನೇತೃತ್ವದಲ್ಲಿ ಗ್ರಾಮದ ಹಿರಿಯರು, ಕಾಂಗ್ರೆಸ್ ಕಾರ್ಯಕರ್ತರು, ಹೆಬ್ಬಾಳ್ಕರ್ ಬೆಂಬಲಿಗರು ವಿಶೇಷ ಪೂಜೆ ಮಾಡಿದರು. ಸಚಿವರ ಆರೋಗ್ಯ ವೃದ್ಧಿಗಾಗಿ ಧನ್ವಂತರಿ ಪೂಜಾ ಸೇರಿ ವಿವಿಧ ಪೂಜೆ ನೆರವೇರಿಸಲಾಯಿತು. ಮಹಾ ಅಭಿಷೇಕ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಯಿತು.

Share this article