ಕನ್ನಡಪ್ರಭ ವಾರ್ತೆ ಮಳವಳ್ಳಿ

ಭವಿಷ್ಯವನ್ನು ಉತ್ತಮಗೊಳಿಸಲು ವಿದ್ಯಾರ್ಥಿಗಳಿಗೆ ವೃತ್ತಿ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ಮುಖ್ಯವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪಿ.ಎಲ್.ಮಲ್ಲಣ್ಣ ಸ್ಮಾರಕ ಪತ್ರಿಕಾ ಭವನದ ನೂತನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪದವಿಗಳಿಗೆ ಮಹತ್ವ ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮಟ್ಟದಿಂದಲೇ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿಯೂ ಅತ್ಯವಶ್ಯಕವಾಗಿದೆ ಎಂದರು.

ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಸುಸಜ್ಜಿತ ರಸ್ತೆ ಅಭಿವೃದ್ಧಿ, ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ಕಾವೇರಿ ನೀರು, ನಿರಂತರ ವಿದ್ಯುತ್, ಸರ್ಕಾರಿ ಶಾಲೆಗಳನ್ನು ನವೀಕರಣಗೊಳಿಸುವುದರ ಜೊತೆಗೆ ಸ್ಮಾರ್ಟ್ ಕ್ಲಾಸ್ ಅಳವಡಿಕೆ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಬೇಕಾದ ಆಗತ್ಯ ಮೂಲಭೂತ ಸೌಲಭ್ಯ, ರೈತರ ಕೃಷಿ ಅಭಿವೃದ್ಧಿಗಾಗಿ ನೀರಾವರಿ ಯೋಜನೆ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸುವುದರ ಮೂಲಕ ಮತದಾರರ ನಂಬಿಕೆಗೆ ಚ್ಯೂತಿ ಬಾರದ ರೀತಿಯಲ್ಲಿ ಕ್ಷೇತ್ರವನ್ನು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.


ಮಳವಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿ ತಂದೆಯವರ ಹೆಸರಿನಲ್ಲಿ ಸ್ಮಾರಕವಾಗಿ ಪತ್ರಿಕಾ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಲಾಗಿದ್ದು, ನನ್ನ ಜವಾಬ್ದಾರಿಯಲ್ಲಿ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಪಟ್ಟಣದ ಸಿದ್ಧಾರ್ಥನಗರ ಹಾಗೂ ೮ನೇ ವಾರ್ಡ್‌ನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿದರು. ತಾಲೂಕು ಪಂಚಾಯ್ತಿ ಕಚೇರಿ ಮುಂಭಾಗ ನಂದಿನಿ ಪಾರ್ಲರ್‌ನ್ನು ಉದ್ಘಾಟಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿ.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ ಕಾಡುಕೊತ್ತನಹಳ್ಳಿ, ಉಪಾಧ್ಯಕ್ಷರಾದ ಕೆ.ಸಿ.ಮಂಜುನಾಥ್, ರವಿ ಸಾವಂದಿಪುರ, ಸಿ.ಎ.ಲೋಕೇಶ್, ಕಾರ್ಯದರ್ಶಿಗಳಾದ ಎನ್.ನಾಗೇಶ್, ಶಿವರಾಜ್ ಜಿಲ್ಲಾ ನಿರ್ದೇಶಕರಾದ ಎಂ.ನಾಗೇಶ, ಎ.ಬಿ.ಚೇತನ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮನ್‌ಮುಲ್ ನಿರ್ದೇಶಕ ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಸೇರಿದಂತೆ ಇತರರಿದ್ದರು.