ಕನ್ನಡಪ್ರಭ ವಾರ್ತೆ ಮೈಸೂರು
ಈ ಉದ್ಯಾನದ ಮೂರೂ ಕಡೆಗಳಲ್ಲಿ ಇರುವ ಮನೆಗಳಿಗೆ ಈ ಉದ್ಯಾನದಿಂದ ಒಳ್ಳೆಯ ಗಾಳಿ-ಬೆಳಕು ಬರುತ್ತದೆ. ಹಾಗಾಗಿ ಈ ಉದ್ಯಾನದ ಸುತ್ತ ಇರುವ ನರಸರಾಜ ರಸ್ತೆ, ಜಯಲಕ್ಷ್ಮೀ ರಸ್ತೆ ಹಾಗೂ ವಿಷ್ಣುವರ್ಧನ ರಸ್ತೆಯ ಬಳಿ ಇರುವ ಮನೆಯ ಮಾಲೀಕರು ತಮ್ಮ ಜಾಗದಲ್ಲಿ ಪೂರ್ತಿಯಾಗಿ ಮನೆ ನಿರ್ಮಿಸಿಕೊಳ್ಳುವಂತಿಲ್ಲ. ಮನೆಯ ಶೇ.20 ಭಾಗದಷ್ಟಾದರೂ ಜಾಗವನ್ನು ಖಾಲಿ ಬಿಟ್ಟು ಉಳಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಬಹುದು. ಸಾರ್ವಜನಿಕ ಉದ್ಯಾನದಿಂದ ಅನುಕೂಲ ಪಡೆಯುವವರು ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಲಿ ಎಂದು ರೂಪಿಸಲಾದ ಹಳೆಯ ನಿಯಮ ಇದು.
ಈ ಉದ್ಯಾನದ ಸುತ್ತಲೂ ಇರುವ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಸುಂದರವಾಗಿ ನವೀಕರಿಸಲಾಗಿದೆ.ನರಸರಾಜ ಮಾರ್ಗದಲ್ಲಿ ರಸ್ತೆ, ಪಾದಚಾರಿ ಮಾರ್ಗದ ಜೊತೆಗೆ ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಸುರಕ್ಷಿತವಾದ ಮತ್ತೊಂದು ಕಿರುಮಾರ್ಗವನ್ನೂ ನಿರ್ಮಿಸಲಾಗಿದೆ.
ತಮ್ಮ ಸ್ವಂತ ಜಾಗದಲ್ಲಿಯೇ ಶೇ. 20 ಜಾಗವನ್ನು ಸಾರ್ವಜನಿಕರ ಒಳಿತಿಗಾಗಿ ಮೀಸಲಿಡುವ ಜವಾಬ್ದಾರಿ ಹೊಂದಿರುವ ಈ ಮಹಾನುಭಾವರು ರಸ್ತೆ, ಪಾದಚಾರಿ ಮಾರ್ಗ, ಕಿರುಮಾರ್ಗ ಮುಂತಾದ ಶೇ. 100 ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡು ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡಿ ಸಾರ್ವಜನಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದರೂ ಕೂಡ ಪಾಲಿಕೆ ಮತ್ತು ಪೊಲೀಸರು ತೆಪ್ಪಗಿರುವುದೇಕೆ?
ಮೈಸೂರಿನ ಪೊಲೀಸ್ ಮತ್ತು ಪಾಲಿಕೆಯ ಅಧಿಕಾರಿಗಳ ಜಾಣ ಮೌನ ಅನುಮಾನ ಮೂಡಿಸುತ್ತಿದೆ.ಈ ಕೂಡಲೇ ಮೈಸೂರು ನಗರ ಪೊಲೀಸ್ ಹಾಗೂ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರು ಅಕ್ರಮಾದಿತ್ಯರ ಈ ಕಾರುಬಾರಿಗೆ ಬ್ರೇಕ್ ಹಾಕಿ ಸಾರ್ವಜನಿಕರ ಹಿತಾಸಕ್ತಿಗಳನ್ನು ಕಾಪಾಡಲಿ. ಇದು ಸಾಧ್ಯವಾಗದೇ ಹೋದರೆ ಮನುವನ ಉದ್ಯಾನವನ್ನೂ ನಾಶಪಡಿಸಿ, ಈ ಕಾರುಗಳ ಅಂಗಡಿಯ ಮಾಲೀಕರಿಗೆ ತಮ್ಮ ಕಾರುಗಳನ್ನು ನಿಲ್ಲಿಸಲು ಸದವಕಾಶ ಕಲ್ಪಿಸಿಕೊಡಿ!!