ಕುಶಾಲನಗರ: ಕುಶಾಲನಗರ ಸಮೀಪ ಕಣಿವೆಯ ಐತಿಹಾಸಿಕ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ವೇದಬ್ರಹ್ಮ ನರಹರಿ ಶರ್ಮ ಅವರ ನೇತೃತ್ವದ ಅರ್ಚಕರ ತಂಡದಿಂದ ವಿಶೇಷ ಪೂಜೆ ಸಲ್ಲಿಸಿ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಪದ್ಧತಿಯಂತೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾದಿಗಳಿಗೆ ಹಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಿದರು.
ರಥೋತ್ಸವಕ್ಕೆ ಕೊಡಗು ಜಿಲ್ಲೆಯ ಭಕ್ತರೂ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು.ದೇವಾಲಯ ಸಮಿತಿಯಿಂದ ಭಕ್ತರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯಧ್ಯಕ್ಷ ಕೆ.ಎಸ್.ಮಾಧವ, ಕಾರ್ಯದರ್ಶಿ ಟಿ.ಎನ್.ಶೇಷಾಚಲ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ ಸೇರಿದಂತೆ ನಿರ್ದೇಶಕರು, ಅರ್ಚಕರು ಇದ್ದರು.