ಮೋಟೆಬೆನ್ನೂರು ಬಳಿ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು, 6 ಜನರ ದುರ್ಮರಣ

KannadaprabhaNewsNetwork |  
Published : May 09, 2025, 12:46 AM ISTUpdated : May 09, 2025, 08:31 AM IST
ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು. | Kannada Prabha

ಸಾರಾಂಶ

ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವೇರಿ/ಬ್ಯಾಡಗಿ : ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅದರಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.ಘಟನೆಯಲ್ಲಿ ಹರಿಹರದ ಸೈಯದ್ ರ‍್ಹಾನ್ ಇಮಾಮವುಲ್ಲಾ (20), ಉಮ್ಮೇರಾ ಸೈಯದ್ ಇಮಾಮವುಲ್ಲಾ (11), ಗೋವಾದ ಆಲೀಷಾ ಅಕ್ಬರ್ ನಾರಂಗಿ (22), ಗೋವಾದ ಪುರಾಖಾನ್ ಅಕ್ಬರ್ ನಾರಂಗಿ (14), ರಾಣಿಬೆನ್ನೂರಿನ ಉಮ್ಮೀಶೀಫಾ ಅಫ್ರಾಜ್ ಉದಗಟ್ಟಿ (13), ಧಾರವಾಡದ ಆಶೀಯಾ ಖಲಂದರ (12) ಮೃತಪಟ್ಟವರು. ಗೋವಾದ ಮೇಹಕ್ ರಶೀದ್ ನಾರಂಗಿ (18), ರಾಣಿಬೆನ್ನೂರಿನ ಉಮ್ಮೀತಸ್ಕೀನ್ ಅಪ್ರೋಜ್ ಉದಗಟ್ಟಿ (11) ಗಂಭೀರವಾಗಿ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ವಿವರ: ಬೇಕರಿ ವ್ಯಾಪಾರಿಯಾಗಿರುವ ರಾಣಿಬೆನ್ನೂರು ನಗರದ ಅಫ್ರೋಜ್ ಎಂಬುವರ ಮನೆಯಲ್ಲಿ ಬುಧವಾರ ಕಾರ್ಯಕ್ರಮ ಇತ್ತು. ಹೀಗಾಗಿ ರಾಣಿಬೆನ್ನೂರಿಗೆ ಗೋವಾ, ಧಾರವಾಡ, ಹರಿಹರದಿಂದ ಸಂಬಂಧಿಕರು ಬಂದಿದ್ದರು. ಸಂಭ್ರಮದಿಂದ ಎಲ್ಲರೂ ಸೇರಿಕೊಂಡು ಕಾರ್ಯಕ್ರಮ ಮಾಡಿದ್ದರು. ಶಾಲೆಗಳಿಗೆ ರಜೆ ಇದ್ದಿದ್ದರಿಂದ ಗುರುವಾರ ಇವರೆಲ್ಲರೂ ಸೇರಿ ಆಡಿ ಕಾರಿನಲ್ಲಿ ಅಗಡಿ ತೋಟ, ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಗೋವಾಕ್ಕೆ ಪ್ರಯಾಣ ಬೆಳೆಸುವ ಉದ್ದೇಶ ಹೊಂದಿದ್ದರು. ಆದರೆ, ಪ್ರಯಾಣ ಬೆಳೆಸಿ ಕೆಲವೇ ನಿಮಿಷಗಳಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಹಿಂಭಾಗದಿಂದ ಕಾರು ಡಿಕ್ಕಿ ಹೊಡೆದು ಪಲ್ಟಿ ಆಗಿ ನಜ್ಜುಗುಜ್ಜಾಗಿ 6 ಜನ ದುರ್ಮರಣ ಹೊಂದಿದ್ದಾರೆ.

ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಓರ್ವನ ಸ್ಥಿತಿ ಗಂಭೀರ: ಮೋಟೆಬೆನ್ನೂರು ಬಳಿ ಆಡಿ ಕಾರು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ರಾಣಿಬೆನ್ನೂರಿಂದ ಹುಬ್ಬಳ್ಳಿಯತ್ತ ಹೊರಟ ಕಾರಿನಲ್ಲಿ ಇಬ್ಬರು ಪುರುಷರು ಹಾಗೂ ಆರು ಮಂದಿ ಮಹಿಳೆಯರು ಸೇರಿ 8 ಜನರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದರು.

ಮೃತರ ಮನೆಯಲ್ಲಿ ನೀರವ ಮೌನ

ರಾಣಿಬೆನ್ನೂರು: ಜವರಾಯನ ಅಟ್ಟಹಾಸಕ್ಕೆ ರಸ್ತೆ ಅಪಘಾತದಲ್ಲಿ ಬಲಿಯಾದವರ ಕುಟುಂಬದ ಮನೆಯಲ್ಲಿ ಗುರುವಾರ ನೀರವ ಮೌನ ಆವರಿಸಿತ್ತು.ಬ್ಯಾಡಗಿ ತಾಲೂಕಿನ ಛತ್ರ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಆರು ಜನ ಸಾವಿಗೀಡಾಗಿದ್ದರು. ಘಟನೆಯಲ್ಲಿ ಇಲ್ಲಿಯ ಸಿದ್ದೇಶ್ವರ ನಗರದ ನಿವಾಸಿ ಅಪ್ರೋಜ್ ಉದಗಟ್ಟಿ ಅವರ ಮಗಳಾದ ಉಮ್ಮಿ ಶಿಪಾ ಉದಗಟ್ಟಿ(17 ) ಸಾವಿಗೀಡಾಗಿದ್ದು, ಇನ್ನೊಬ್ಬ ಪುತ್ರಿ ಗಾಯಗೊಂಡಿದ್ದಾಳೆ. ಘಟನೆಯಿಂದ ಅಪ್ರೋಜ್ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.ಅಪಘಾತದಲ್ಲಿ ಮೃತಪಟ್ಟ ಯುವತಿಯ ಅಜ್ಜಿ(ಮಗನ ಮಗಳು) ಹಾಗೂ ಚಿಕ್ಕಪ್ಪಂದಿರು ಮನೆಯಲ್ಲಿದ್ದರು. ಮೃತ ಯುವತಿಯ ಚಿಕ್ಕಪ್ಪನೊಬ್ಬ ಹಾಗೂ ಅಜ್ಜ ಕೊರೋನಾ ಸಂದರ್ಭದಲ್ಲಿ ಮೃತಪಟ್ಟಿದ್ದರು. ಈ ಅಘಾತದಿಂದ ಅಜ್ಜಿ ಹೊರಬಂದಿರಲಿಲ್ಲ ಹಾಗೂ ಮನೆಯಲ್ಲಿ ಮೃತ ಬಾಲಕಿಯೇ ಹಿರಿಯ ಮೊಮ್ಮಗಳಾಗಿದ್ದು, ಹೀಗಾಗಿ ಅಜ್ಜಿಗೆ ಅಪಘಾತದ ವಿಷಯ ತಿಳಿಸಿರಲಿಲ್ಲ.ವಿಹಾರಕ್ಕೆ ತೆರಳಿದ್ದ ಕುಟುಂಬದ ಸದಸ್ಯರು ಈ ರೀತಿ ಅವಘಡಕ್ಕೆ ಬಲಿಯಾಗಬಹುದು ಎಂದುಕೊಂಡಿರಲಿಲ್ಲ. ವಿಧಿಯಾಟ ಅವರನ್ನು ದಾರಿ ಮಧ್ಯದಲ್ಲಿಯೇ ಕರೆಸಿಕೊಂಡಿತ್ತು. ಮನೆ ಬಳಿ ಸಾಕಷ್ಟು ಜನ ನೆರೆದಿದ್ದರು. ಎಲ್ಲರೂ ಮಕ್ಕಳ ಸಾವಿಗೆ ಕಣ್ಣೀರಿಟ್ಟರು.

ದೇವರಿಗೂ ಸಹಿಸಿಕೊಳ್ಳಲಾಗಲಿಲ್ಲ:

ನಮ್ಮ ಕುಟುಂಬದಲ್ಲಿನ ಖುಷಿಯನ್ನು ನೋಡಿ ದೇವರಿಗೂ ಸಹಿಸಿಕೊಳ್ಳಲಾಗಲಿಲ್ಲ. ಗೋವಾದಿಂದ ಬಂದಿದ್ದ ಸಂಬಂಧಿಕರು ಹಾಗೂ ಅವರ ಮಕ್ಕಳನ್ನು ಶಿಗ್ಗಾಂವಿ ಬಳಿಯಿರುವ ಅಗಡಿ ತೋಟಕ್ಕೆಕರೆದುಕೊಂಡು ಹೋಗುತ್ತಿದ್ದೆವು. ಬೆಳಗ್ಗೆ 11 ಗಂಟೆಗೆ ಮನೆಯಿಂದ 2 ಕಾರುಗಳಲ್ಲಿ ಹೊರಟೆವು. ನಾನು ನಿಧಾನವಾಗಿ ಬನ್ನಿ ಎಂದೇ ಹೇಳಿದ್ದೆ. ಬಳಿಕ ನಾನು ಫೋನ್ ಮಾಡಿದರೂ ರಿಸೀವ ಮಾಡಲಿಲ್ಲ ಬಳಿಕ ಅಪಘಾತವಾದ ವಿಷಯ ತಿಳಿಯಿತು. ಮೃತರೆಲ್ಲ ಕುಟುಂಬದ ಅಕ್ಕ ತಂಗಿಯರ ಮಕ್ಕಳಾಗಿದ್ಧಾರೆ ಎಂದು ಮೃತರ ಸಂಬಂಧಿ ಅಮೀರ್ ಖಾನ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ