ಬಂಗಾರಪೇಟೆ ಮರಗಲ್ ಗ್ರಾಮದ ಬಳಿ ಘಟನೆ । ಅತಿಯಾದ ವೇಗದಿಂದ ಬಂದು ರಸ್ತೆ ವಿಭಜಕಕ್ಕೆ ಡಿಕ್ಕಿ
ತಿರುಪತಿ ಶ್ರೀ ವೆಂಕಟರಮಣಸ್ವಾಮಿಯ ದರ್ಶನ ಪಡೆದು ಊರಿಗೆ ಮರಳುತ್ತಿದ್ದ ಭಕ್ತರ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಚೆನ್ನೈ-ಬೆಂಗಳೂರು ಕಾರಿಡಾರ್ ಎಕ್ಸ್‌ಪ್ರೆಸ್ ಹೈವೆಯ ಮರಗಲ್ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.ಮೃತರನ್ನು ಮಹಾರಾಷ್ಟ್ರದ ಪುಣೆ ನಿವಾಸಿಗಳಾದ ವಿಶ್ವನಾಥ ಪವಾರ್ (32), ನವನಾಥ್ ಗಾಯಕ್ವಾಡ್ (40), ಕಿರಣ್ ಜಗದಾಳೆ (38) ಹಾಗೂ ವಿಶಾಲ್ (37) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸೋಮನಾಥ ಕೊಲ್ಲೆ (53) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಯ ವಿವರ:
ಪುಣೆ ಮೂಲದ ಐವರು ಮಹಾರಾಷ್ಟ್ರ ನೋಂದಣಿಯ ಮಹೀಂದ್ರಾ ಟಿಯುವಿ ವಾಹನದಲ್ಲಿ ತಿರುಪತಿಗೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಎಕ್ಸ್‌ಪ್ರೆಸ್‌ವೇಯ ಮರಗಲ್ ಬಳಿ ಚಲಿಸುತ್ತಿದ್ದಾಗ, ಅತಿಯಾದ ವೇಗದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ವಿಭಜಕಕ್ಕೆ ರಭಸವಾಗಿ ಅಪ್ಪಳಿಸಿದೆ.ಡಿಕ್ಕಿಯ ತೀವ್ರತೆಗೆ ವಾಹನವು ಗಾಳಿಯಲ್ಲಿ ಹಾರಿ ರಸ್ತೆಗೆ ಅಪ್ಪಳಿಸಿದ್ದು, ವಾಹನದಲ್ಲಿದ್ದ ಐವರೂ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಅಪಘಾತದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತದೇಹಗಳು ಬಿದ್ದಿದ್ದ ದೂರವನ್ನು ಗಮನಿಸಿದರೆ ವಾಹನ ಅತಿಯಾದ ವೇಗದಲ್ಲಿ ಚಲಿಸುತ್ತಿತ್ತು ಎಂಬುದು ಸ್ಪಷ್ಟಪಡಿಸುತ್ತದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ರವಿಕುಮಾರ್ ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಸೋಮನಾಥ ಕೊಲ್ಲೆ ಅವರಿಂದ ಮಾಹಿತಿ ಸಂಗ್ರಹಿಸಿರುವ ಪೊಲೀಸರು, ಮಹಾರಾಷ್ಟ್ರದಲ್ಲಿರುವ ಅವರ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪೋಷಕರು ಮತ್ತು ಸಂಬಂಧಿಕರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.