ಕನ್ನಡಪ್ರಭ ವಾರ್ತೆ ಬೇಲೂರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಸೀಕೆರೆ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಲು ವೃತ್ತನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಪಿಎಸ್ಐ ಪ್ರವೀಣ್ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೇವಲ ೧೫ ದಿನದಲ್ಲಿ ಬಂಧಿಸಿ ಆರೋಪಿಯಿಂದ ಚಿನ್ನಾಭರಣ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರಿಗೆ ಮಾಹಿತಿ ನೀಡಿದ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ ಬೇಲೂರು ಪೊಲೀಸ್ ಠಾಣೆ ವ್ಯಾಪ್ತೀಯ ಮಂಡಲಮನೆ ವಾಗಿನಕೆರೆ ಗ್ರಾಮದಲ್ಲಿ ಮನೆ ಕಳ್ಳತನ ಹಾಗೂ ವಾಗಿನಕೆರೆ ಗ್ರಾಮದ ಸುರೇಶ್ ಎಂಬುವವರಿಗೆ ಸೇರಿದ ಬುಲೇನೋ ಕಾರನ್ನು ಕದ್ದು ಪರಾರಿಯಾಗಿದ್ದ ಭದ್ರಾವತಿ ಮೂಲದ ಸುರೇಶ್ ಎಂಬಾತನನ್ನು ಬಂಧಿಸಿ ಆರೋಪಿಯಿಂದ ೧೦೦ ಗ್ರಾಂ ಚಿನ್ನ ೧ ದ್ವಿಚಕ್ರ ವಾಹನ ಬುಲೇನೊ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಈತನ ಮೇಲೆ ೧೪ ಮನೆಕಳ್ಳತನ, ಕಳವು ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದು ಮಂಡಲಮನೆ, ವಾಗಿನಕೆರೆ ಹಾಗೂ ಸಾಲಗಾಮೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ೪ ಪ್ರಕರಣ ನಮ್ಮ ವ್ಯಾಪ್ತಿಯಲ್ಲಿ ದಾಖಲಾಗಿದೆ ಎಂದರು.
ಈ ವೇಳೆ ಪಿಎಸ್ಐ ಪ್ರವೀಣ್, ಚೇತನ್, ದೇವರಾಜ್, ಭುವನೇಶ್, ಶಿವಸ್ವಾಮಿ, ದೇವೇಂದ್ರ, ಠಾಣಾ ಸಿಬ್ಬಂದಿ ಹಾಜರಿದ್ದರು.