ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು- ಕಾರ್ಯಕರ್ತರು ರಾಜ್ಯಪಾಲರು, ಮೈತ್ರಿ ಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರ ಹಿಂದೆ ರಾಜಕೀಯ ದ್ವೇಷ ಅಡಗಿದೆ. ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸದೆ ಮೈತ್ರಿ ಪಕ್ಷಗಳು ನಡೆಸಿರುವ ಷಡ್ಯಂತ್ರ ಎಂದು ಕಿಡಿಕಾರಿದರು.ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಸಲುವಾಗಿ ಬಿಜೆಪಿ- ಜೆಡಿಎಸ್ ಪಕ್ಷಗಳ ವರಿಷ್ಠರು ರಾಜ್ಯಪಾಲರ ಮೇಲೆ ಪ್ರಭಾವ ಬೀರಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ. ಸಿದ್ದರಾಮಯ್ಯನವರ ಮೇಲೆ ಕಳಂಕ ಹೊರಿಸಿ, ತೇಜೋವಧೆ ಮಾಡುವುದಕ್ಕೆ ಎರಡೂ ಪಕ್ಷಗಳು ಸಂಚು ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ೫೦:೫೦ರ ಅನುಪಾತವನ್ನು ಮುಡಾ ಹಗರಣವೆಂದು ರಾಜ್ಯಪಾಲರು ಒಪ್ಪಿಕೊಳ್ಳುವುದಾದರೆ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ವಿವಿಧ ಸಂಘಟನೆಯ ಮುಖಂಡರಾದ ಸುರೇಶ್, ಸಿ.ಎಂ.ದ್ಯಾವಪ್ಪ, ನಾಗರಾಜು, ಶ್ರೀಧರ್, ಶಿವಪ್ರಕಾಶ್, ವಿಜಯಲಕ್ಷ್ಮೀ ರಘುನಂದನ್, ಮಂಜುನಾಥ್, ಅಮ್ಜದ್ ಪಾಷಾ, ಅಂಜನಾ ಶ್ರೀಕಾಂತ್, ರುದ್ರಪ್ಪ, ದೊಡ್ಡಯ್ಯ, ಸೋಮಣ್ಣ, ಇತರರು ಭಾಗವಹಿಸಿದ್ದರು.