ಹಂಪಿ: ಇಲ್ಲಿನ ಹಂಪಿ ಉತ್ಸವದಲ್ಲಿ ಮಹಾನವಮಿ ದಿಬ್ಬದ ಬಳಿ ನಿರ್ಮಿಸಲಾದ ವಿದ್ಯಾರಣ್ಯ ವೇದಿಕೆಯಲ್ಲಿ ಶನಿವಾರ ರಾತ್ರಿ ಕೂಡ್ಲಿಗಿಯ ಬಸಂತಿ (ದಿವ್ಯಕುಮಾರಿ) ಮತ್ತು ತಂಡದವರಿಂದ ಕಂದಗಲ್ ಹನುಮಂತರಾಯರು ರಚಿಸಿದ ರಕ್ತರಾತ್ರಿ ಎಂಬ ರೌದ್ರಮಯ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

ಈ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಕೆ.ಬಸವರಾಜ್, ಧರ್ಮರಾಯನ ಪಾತ್ರದಲ್ಲಿ ನಾಗರಾಜ್ ಮಾಡ್ಲಾಕನಹಳ್ಳಿ, ಭೀಮನ ಪಾತ್ರದಲ್ಲಿ ಡಾ.ರಮೇಶ್ ಹಂಚಿನಮನಿ, ಧುರ್ಯೋದನ ಪಾತ್ರದಲ್ಲಿ ಡಾ.ಡಿ. ಉಮಾಶಂಕರ್, ಶಕುನಿ ಪಾತ್ರದಲ್ಲಿ ಸಿದ್ದನಗೌಡ ಬೆಳ್ಳೆಕಟ್ಟೆ, ಅಶ್ವಥಾಮನ ಪಾತ್ರದಲ್ಲಿ ಮಾಳಿಗರ ಶಿವಲಿಂಗಪ್ಪ, ಅರ್ಜುನನ ಪಾತ್ರದಲ್ಲಿ ಪ್ರಕಾಶಗೌಡ, ಕರ್ಣ ಗಂಧರ್ವನ ಪಾತ್ರದಲ್ಲಿ ಬಿ.ಧನಂಜಯ ಹಾಗೂ ದ್ರೌಪದಿ ಪಾತ್ರದಲ್ಲಿ ನಾಗರತ್ನಮ್ಮ ಸೋಗಿ, ಉತ್ತರೆ, ಭಾನುಮತಿ ಪಾತ್ರದಲ್ಲಿ ಬಸಂತಿ (ದಿವ್ಯಕುಮಾರಿ) ಯವರು ಮನೋಜವಾಗಿ ಅಭಿನಯಿಸಿದರು.

ಈ ನಾಟಕಕ್ಕೆ ಕ್ಯಾಷಿಯೋ ವಾದಕರಾಗಿ ವಿರುಪಾಕ್ಷಪ್ಪ ಮೋರಿಗೇರಿ, ತಬಲ ವಾದಕರಾಗಿ ಶರಣಪ್ಪ ಬಂಡಿ, ಸಂಗೀತ ಸೇವೆ ಸಲ್ಲಿಸಿದರು. ಈ ನಾಟಕಕ್ಕೆ ಪ್ರಸಾದನ ಹಾಗೂ ವಸ್ತ್ರಾಲಂಕಾರವನ್ನು ಚಳ್ಳಕೆರೆಯ ಮುರುಳಿಯವರು ನಾಟಕಕ್ಕೆ ಮೆರಗು ತಂದರು.

ಅತ್ಯುತ್ತಮ ನಾಟಕವನ್ನು ವೀಕ್ಷಿಸಲು ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ನಾಟಕಗಳಿಗಾಗಿ ಜಿಲ್ಲಾಡಳಿತ ಮಹಾನವಮಿ ದಿಬ್ಬದ ವಿದ್ಯಾರಣ್ಯ ವೇದಿಕೆಯನ್ನು ನಿರ್ಮಾಣ ಮಾಡಿದ್ದಾರೆ. ಮಹಾನವಮಿ ದಿಬ್ಬದ ಬಳಿ ನಿರ್ಮಿಸಿದ ವಿದ್ಯಾರಣ್ಯ ವೇದಿಕೆ ದೂರವಾದ ಕಾರಣ ಈ ವೇದಿಕೆಯಲ್ಲಿ ಪ್ರೇಕ್ಷಕರ ಕೊರತೆಯಿಂದ ಖಾಲಿ ಕುರ್ಚಿಗಳು ಬಣಗುಡುತ್ತಿದ್ದವು. ನಮಗೆ ನಾಟಕ ಅಭಿನಯಿಸಲು ಈ ವೇದಿಕೆ ಸೂಚಿಸಿದ್ದಾರೆ. ಆದರೆ ಈ ವೇದಿಕೆಯಲ್ಲಿ ಪ್ರೇಕ್ಷಕರ ಕೊರತೆಯಿಂದ ನಾಟಕ ಯಶಸ್ವಿಗೊಳ್ಳಲು ಸಾಧ್ಯವಿಲ್ಲ. ಪ್ರೇಕ್ಷಕರ ಚಪ್ಪಾಳೆಯೇ ಕಲಾವಿದರಿಗೆ ಹುಮ್ಮಸ್ಸು ತರುವಂತೆ ಮಾಡುತ್ತದೆ. ಹಾಗಾಗಿ ನಾಟಕಗಳನ್ನು ಅಭಿನಯಿಸಲು ಕಲಾವಿದರಿಗೆ ಈ ವೇದಿಕೆ ನೀಡಬಾರದು ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದರು.