ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ದೇರೆಬೈಲು ಕೊಂಚಾಡಿಯಲ್ಲಿ ಲಿಕ್ಕರ್ ಲಾಂಜ್ ಹೆಸರಿನಲ್ಲಿ ಹೊಸತಾಗಿ ಆರಂಭಗೊಂಡ ರೆಸ್ಟೋರೆಂಟ್ ವಿದ್ಯಾರ್ಥಿಗಳಿಗೆ ಆಫರ್ ನೀಡಿ ಕೇಸು ಎದುರಿಸುವಂತಾಗಿದೆ.
‘ಸ್ಪೂಡೆಂಟ್ಸ್ ನೈಟ್ ಬಿಗ್ ಆಫರ್’ ಹೆಸರಲ್ಲಿ ಲಿಕ್ಕರ್ ಲಾಂಜ್‌ನಲ್ಲಿ ಆಯೋಜನೆ ಆಗಿದ್ದ ಪಾರ್ಟಿಗೆ ಸದ್ಯಕ್ಕೆ ಕಾವೂರು ಪೊಲೀಸರು ತಡೆ ಹಾಕಿದ್ದು, ಬಾರ್ ಮಾಲೀಕನಿಗೆ ನೋಟೀಸ್ ನೀಡಿದ್ದಾರೆ. ಬಳಿಕ ಎಚ್ಚೆತ್ತ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.ಪಾರ್ಟಿ ಆಯೋಜಕರು ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ 15 ಪರ್ಸೆಂಟ್ ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಪಾನದ ವ್ಯವಸ್ಥೆ ಇದೆಯೆಂದು ಆಫರ್ ನೀಡಿದ್ದರು. ಲಿಕ್ಕರ್ ಲಾಂಜ್ ಆಯೋಜಿಸಿದ್ದ ನೈಟ್ ಪಾರ್ಟಿಯ ಸ್ಟಿಕ್ಕರ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಬಾರ್ ಮತ್ತು ಪಬ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಆಫರ್ ನೀಡಿ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿರುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಾಗೂ ನಿಗಾ ವಹಿಸಲು ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇರೆಬೈಲ್ ಬಾರ್‌ನ ಪ್ರಕರಣದಲ್ಲಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸ್ಪಷ್ಟಪಡಿಸಿದ್ದಾರೆ.