ಹಿಂದೂ ಕಾರ್ಯಕರ್ತರ ಮೇಲೆ ಕೇಸು: ಉಡುಪಿಯಲ್ಲಿ ಪ್ರತಿಭಟನೆ

KannadaprabhaNewsNetwork | Published : Nov 26, 2024 12:49 AM

ಸಾರಾಂಶ

ಕಾರ್ಕಳ ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವದ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ. ಇದನ್ನು ವಿರೋದಿಸಿ ಹಿಂಜಾವೇಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇತ್ತೀಚೆಗೆ ಕಾರ್ಕಳ ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವದ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿರುವುದರ ವಿರುದ್ಧ ಸೋಮವಾರ ಹಿಂದೂ ಜಾಗರಣ ವೇದಿಕೆ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಗರದ ಬ್ರಹ್ಮಗಿರಿಯ ಆಸ್ಕರ್ ಫರ್ನಾಂಡಿಸ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಈ ಸಂದರ್ಭ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಹಿಂದುತ್ವವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ, ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಂದ ಅಶಾಂತಿ ಸೃಷ್ಟಿಸುವ ಒಂದೇ ಒಂದು ಘಟನೆ ನಡೆದಿಲ್ಲ, ಯಾವುದೇ ದೂರು ದಾಖಲಾಗಿಲ್ಲ. ಆದರೂ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್‌ ಇಲಾಖೆ ಹಿಂದೂ ಕಾರ್ಯಕರ್ತರ ಮೇಲೆ ಸುಮೊಟೋ ಕೇಸ್ ಹಾಕುತ್ತಿರುವುದು ನಾಚಿಗೆಗೇಡಿನ ವಿಷಯ. ಖಾಕಿ ಖಾಕಿಯಾಗಿಯೇ ಉಳಿಯಬೇಕು, ಖಾಕಿ ಕಾಂಗ್ರೆಸ್ ಆಗಬಾರದು ಎಂದರು.ಹಿಂಜಾವೇ ಮುಖಂಡ ಪ್ರಶಾಂತ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಹಿಂದೂ ಸಂಘಟನೆಯ ಮುಖಂಡರಾದ ಸುನೀಲ್ ಕೆ.ಆರ್., ದಿನೇಶ್ ಮೆಂಡನ್, ಮಹೇಶ್ ಬೈಲೂರು, ಜಯರಾಂ ಅಂಬೆಕಲ್ಲು, ಪುನೀತ್ ರಾಜ್ ಮಂಗಳೂರು, ಪಕ್ಷದ ಪ್ರಮುಖರಾದ ರೇಷ್ಮಾ ಉದಯ ಶೆಟ್ಟಿ, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಜಿತೇಂದ್ರ ಶೆಟ್ಟಿ ಉದ್ಯಾವರ, ಪ್ರಭಾಕರ ಪೂಜಾರಿ, ವಿಜಯ್ ಕೊಡವೂರು, ಉದಯ್ ಕುಮಾರ್ ಶೆಟ್ಟಿ, ಶ್ರೀಕಾಂತ್‌ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.ಈ ಪ್ರತಿಭಟನೆಯಂಗವಾಗಿ ಬ್ರಹ್ಮಗಿರಿಯಿಂದ ಬನ್ನಂಜೆ ವರೆಗೆ ಮೆರವಣಿಗೆ ನಡೆಸಿ ಅಲ್ಲಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ನೂರಾರು ಸಿಬ್ಬಂದಿಯನ್ನು, ಮೀಸಲು ಪಡೆಯ ಪೊಲೀಸರನ್ನು ಕರೆಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲು 5ಕ್ಕೂ ಹೆಚ್ಚು ಪೊಲೀಸ್ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ ಯಾವುದೇ ಮೆರವಣಿಗೆ, ಮುತ್ತಿಗೆ ಇಲ್ಲದೇ ಬ್ರಹ್ಮಗಿರಿಯಲ್ಲಿ ಒಂದಿಬ್ಬರ ಭಾಷಣಗಳಲ್ಲಿಯೇ ಪ್ರತಿಭಟನೆ ಮುಕ್ತಾಯವಾಯಿತು.

Share this article