ಕನ್ನಡಪ್ರಭ ವಾರ್ತೆ ಬೆಂಗಳೂರು
ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ। ಮಧುಕರ್ ಜಿ.ಅಂಗೂರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಹಣ ದುರ್ಬಳಕೆ ತಡೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ಹಣ ದರ್ಬಳಕೆ ಕಾಯ್ದೆ (ಪಿಎಂಎಲ್‌ಎ) 2022ರ ಅಡಿಯಲ್ಲಿ ತಮ್ಮ ವಿರುದ್ಧ ಇಡಿ ದಾಖಲಿಸಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಮಧುಕರ್ ಅಂಗೂರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಅಗತ್ಯಬಿದ್ದರೆ ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟ್ ಮುಂದೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆ ವೇಳೆ ಅರ್ಜಿದಾರರ ವಿರುದ್ಧದ ಪಿಎಂಎಲ್‌ಎ ಅಡಿಯ ಪ್ರಕರಣವನ್ನು ಪುನರ್ ಸ್ಥಾಪನೆ ಮಾಡುವಂತೆ ಕೋರಲು ಸ್ವಾತಂತ್ರ್ಯ ಹೊಂದಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.ಜಾರಿ ನಿರ್ದೇಶನಾಲಯವು ಅರ್ಜಿದಾರರ ವಿರುದ್ಧ 2002ರ ಮಾ.7ರಂದು ಹಣ ದುರ್ಬಳಕೆ ಕಾಯ್ದೆಯಡಿ ದೂರು ದಾಖಲಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಧುಕರ್ ಅಂಗೂರ್, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಪಿಎಂಎಲ್‌ಎ ಶೆಡ್ಯೂಲ್ ಪಟ್ಟಿಯಲ್ಲಿನ ಅಪರಾಧಗಳನ್ನು ಎಸಗಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ಇದ್ದಾಗ ಮಾತ್ರ ಈ ಕಾಯ್ದೆಯಡಿ ಅಪರಾಧ ಪ್ರಕರಣ ದಾಖಲಿಸಬಹುದಾಗಿದೆ. ಆದರೆ, ಐಪಿಸಿ ಸೆಕ್ಷನ್ 120-ಬಿ (ಅಪರಾಧಿಕ ಒಳಸಂಚು) ಅಡಿ ತಮ್ಮ ವಿರುದ್ಧ ಹೊರಿಸಿರುವ ಆರೋಪಗಳು ಪಿಎಂಎಲ್ಎ ಕಾಯ್ದೆಯ ಶೆಡ್ಯೂಲ್ಡ್ ಪಟ್ಟಿಯಲ್ಲಿ ಇಲ್ಲ. ಆದ್ದರಿಂದ ಪಿಎಂಎಲ್ಎ ಕಾಯ್ದೆ ಅಡಿಯ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದರು. ಈ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಪಾಲಿಕೆ ಎಂಜಿನಿಯರ್ ಹುದ್ದೆಗಳ ನೇಮಕಾತಿ ವಿಳಂಬ: ನೋಟಿಸ್‌ಕನ್ನಡಪ್ರಭ ವಾರ್ತೆ ಬೆಂಗಳೂರುಬಿಬಿಎಂಪಿಯಲ್ಲಿ ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗಳ ನೇಮಕಾತಿ ವಿಳಂಬ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.ನಗರದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸರ್ಕಾರ ಹಾಗೂ ಬಿಬಿಎಂಪಿಗೆ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.ಕಳೆದ 2023ರ ಅ.9ರಂದು ವಿಚಾರಣೆ ನಡೆಸಿದಾಗ, ಅಕ್ರಮ ಕಟ್ಟಡಗಳನ್ನು ಗುರುತಿಸಿ ಹಾಗೂ ತೆರವು ಕಾರ್ಯಾಚರಣೆ ಕೈಗೊಳ್ಳಲು ಎಂಜಿನಿಯರ್ ಸೇರಿದಂತೆ ಇತರೆ ಸಿಬ್ಬಂದಿ ಅಗತ್ಯವಾಗಿದೆ. 100 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಬಿಬಿಎಂಪಿ ಪತ್ರ ಬರೆದಿತ್ತು ಎಂಬ ವಿಚಾರವನ್ನು ಗಮನಿಸಿತ್ತು. ಅದರ ಆಧಾರದ ಮೇಲೆ ಎಂಜಿನಿಯರಿಂಗ್ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಬಿಬಿಬಿಎಂಪಿ ಹಾಗೂ ಕೆಪಿಎಸ್‌ಸಿಗೆ ನಿರ್ದೇಶಿಸಿತ್ತು.ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಪ್ರಮೋದ್ ಎನ್. ಕಟಾವಿ, ಕಾಲಮಿತಿಯೊಳಗೆ ಎಂಜಿನಿಯರ್ ಹುದ್ದೆ ಭರ್ತಿ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಬಿಬಿಎಂಪಿ ನೇಮಕಾತಿ ಮಾಡಿದೆಯೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ತಿಳಿಸಿದರು.ಬಿಬಿಎಂಪಿ ಪರ ವಕೀಲ ಹಾಜರಾಗಿ, 92 ಸಿವಿಲ್ ಎಂಜಿನಿಯರ್ ಹುದ್ದೆಗೆ ಭರ್ತಿ ಮಾಡಲು ಕೆಪಿಎಸ್‌ಸಿಗೆ ಬಿಬಿಎಂಪಿ ಕೋರಿದೆ. ಕೆಪಿಎಸ್‌ಸಿಗೆ ನೇಮಕಕ್ಕೆ ಅರ್ಜಿ ಆಹ್ವಾನಿಸಿ 2024ರ ಮಾ.13ರಂದು ಅಧಿಸೂಚನೆ ಸಹ ಹೊರಡಿಸಿದೆ. ಅಧಿಸೂಚನೆಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಲಾಗುವುದು ಎಂದು ನೀಡಬೇಕು ಎಂದು ಕೋರಿದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ಎಂಜಿನಿಯರ್ ಹುದ್ದೆಗಳ ನೇಮಕಾತಿ ಸೂಚಿಸಿ 2023ರ ಅ.9ರಂದು ಹೈಕೋರ್ಟ್ ಆದೇಶ ಮಾಡಿದೆ. ಆದರೆ, ಬಿಬಿಎಂಪಿ ಬಳಿ ಈಗ ನೋಟಿಫಿಕೇಷನ್ ಇಲ್ಲ ಎಂದು ಹೇಳುತ್ತಿದ್ದೀರಿ. ನೋಟಿಫಿಕೇಷನ್ ಸೇರಿದಂತೆ ಎಲ್ಲ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು. ಸಲ್ಲಿಸದೆ ಹೋದರೆ ಕೋರ್ಟ್ ಆದೇಶದ ಮೇಲೆ ಆದೇಶ ಹೊರಡಿಸುತ್ತಾ ಹೋಗುತ್ತಿರುತ್ತದೆ. ಅದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಾ ಹೋಗುತ್ತದೆ ಎಂದು ಕಟುವಾಗಿ ನುಡಿದರು.ಬಿಬಿಎಂಪಿ ಪರ ವಕೀಲರು, ಕೆಪಿಎಸ್‌ಸಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಕೆಪಿಎಸ್‌ಸಿಯೇ ನೇಮಕ ಪ್ರಕ್ರಿಯೆ ನಡೆಸಬೇಕಿದೆ. ಈ ಅರ್ಜಿಯಲ್ಲಿ ಅದು ಪ್ರತಿವಾದಿಯಾಗಿಲ್ಲ. ನಮಗಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಗುತ್ತಿದೆ ಎಂದು ಸಮಜಾಯಿಸಿ ನೀಡಿದರು. ಅದನ್ನು ಪರಿಗಣಿಸಿದ ಹೈಕೋರ್ಟ್, ಅರ್ಜಿಯಲ್ಲಿ ಕೆಪಿಎಸ್‌ಸಿ ಅನ್ನು ಪ್ರತಿವಾದಿ ಮಾಡಿ ನೋಟಿಸ್ ಜಾರಿಗೊಳಿಸಿತು. ಅಲ್ಲದೆ, ಹಿಂದಿನ ಆದೇಶ ಪಾಲಿಸುವ ನಿಟ್ಟಿನಲ್ಲಿ ಬಿಬಿಎಂಪಿ ಸಿವಿಲ್ ಎಂಜಿನಿಯರ್ ನೇಮಕಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಕೆಪಿಎಸ್‌ಸಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.